ಪೌರಕಾರ್ಮಿಕರಿಗೆ ಬೋನಸ್: ಪಾಲಿಕೆಯ ಆಡಳಿತಾಧಿಕಾರಿ ಘೋಷಣೆ

bbmp office
Published on

ಬೆಂಗಳೂರು: ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಡಾ. ಅಂಬೇಡ್ಕರ್ ಜಯಂತಿ ಹಿನ್ನಲೆಯಲ್ಲಿ ಬೋನಸ್ ನೀಡಲಾಗುವುದು ಎಂದು ಪಾಲಿಕೆಯ ಆಡಳಿತಾಧಿಕಾರಿ ಎಸ್.ಆರ್. ಉಮಾಶಂಕರ್ ಪ್ರಕಟಿಸಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿಯ ಡಾ. ರಾಜ್‌ಕುಮಾರ್ ಗಾಜಿನ ಮನೆಯಲ್ಲಿ ಹಮ್ಮಿಕೊಂಡಿರುವ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

ಸದ್ಯ ಕಾಯಂ ಪೌರಕಾರ್ಮಿಕರಿಗೆ ತಲಾ 22 ಸಾವಿರ ಹಾಗೂ ನೇರ ವೇತನ ಅಡಿಯಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ತಲಾ 8 ಸಾವಿರ ರೂ. ಬೋನಸ್ ಸಿಗಲಿದೆ. ಈ ಹಣವನ್ನು ಪೌರಕಾರ್ಮಿಕರು ಸದ್ಬಳಕೆ ಮಾಡಿಕೊಳ್ಳಬೇಕು. ಜತೆಗೆ ಪೌರಕಾರ್ಮಿಕರಿಗಾಗಿ ಒಂಟಿ ಮನೆ ಯೋಜನೆ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿವಿಧ ಸೌಲಭ್ಯ, ಧನಸಹಾಯ ನೀಡಲಾಗುತ್ತಿದೆ. ಹಲವಾರು ಹಿತರಕ್ಷಣಾ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ ಎಂದು ಅವರು ತಿಳಿಸಿದರು.

ಪೌರಕಾರ್ಮಿಕರಿಗೆ ಸನ್ಮಾನ:

ಪಾಲಿಕೆಯ ಎಂಟು ವಲಯಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ 17 ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಜತೆಗೆ ಎಸ್‌ಎಸ್‌ಎಲ್​​ಸಿ, ಪಿಯುಸಿ ಹಾಗೂ ಪದವಿಯಲ್ಲಿ ಉತ್ತಮ ಅಂಕ ಪಡೆದ ಪೌರಕಾರ್ಮಿಕರ 46 ಮಕ್ಕಳನ್ನು ಗೌರವಿಸಲಾಯಿತು. ಇದಕ್ಕೂ ಮುನ್ನ ಗಣ್ಯರು ಪಾಲಿಕೆ ಆವರಣದಲ್ಲಿರುವ ಡಾ. ಅಂಬೇಡ್ಕರ್ ಹಾಗೂ ಪೌರಕಾರ್ಮಿಕರ ಪಿತಾಮಹ ಐ.ಪಿ.ಡಿ ಸಾಲಪ್ಪ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪಾಲಿಕೆಯ ವಿಶೇಷ ಆಯುಕ್ತರಾದ ಡಾ. ಕೆ.ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಅವಿನಾಶ್ ಮೆನನ್ ರಾಜೇಂದ್ರನ್, ಪ್ರೀತಿ ಗೆಹ್ಲೋಟ್, ಪೌರಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಬಾಬು, ವೆಂಕಟರಮಣ ಹಾಗೂ ಮತ್ತಿತರರಿದ್ದರು.

ಡಾ. ಅಂಬೇಡ್ಕರ್ ಅವರ ಕುರಿತಂತಹ ಪುಸ್ತಕಗಳನ್ನು ನಾವೆಲ್ಲರೂ ಓದಿ ಅರಿತುಕೊಳ್ಳಬೇಕಿದೆ. ಅವರ ವ್ಯಕ್ತಿತ್ವವನ್ನು ನಾವು ಎಲ್ಲರಿಗೂ ಪರಿಚಯಿಸಬೇಕು. ಸಂವಿಧಾನ ಶಿಲ್ಪಿಯ ಎಲ್ಲ ವಿಚಾರಧಾರೆ ಇತರರಿಗೂ ತಿಳಿಸಬೇಕಿದೆ.

- ತುಷಾರ್ ಗಿರಿನಾಥ್, ಪಾಲಿಕೆಯ ಮುಖ್ಯ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net