

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಬೆಟ್ಟದಕಾವಲು ಗ್ರಾಮದಲ್ಲಿ ಸೋಮವಾರ ಬೆಳಗ್ಗಿನ ಜಾವ ಬೋನಿನಲ್ಲಿ ಸೆರೆಯಾಗಿದ್ದ ಎರಡು ವರ್ಷದ ಹೆಣ್ಣು ಚಿರತೆ ಅಸ್ವಸ್ಥಗೊಂಡು ಮೃತಪಟ್ಟಿದೆ.
ಬೆಟ್ಟದಕಾವಲು ಗ್ರಾಮದ ಶಿವಪ್ಪ ಹಾಗೂ ಭಾಗ್ಯಮ್ಮ ದಂಪತಿಯ ಮೂರು ನಾಯಿ ಹಾಗೂ ಆಡುವನ್ನು ಚಿರತೆ ಬಲಿ ಪಡೆದಿತ್ತು. ಅಲ್ಲದೆ ಎಮ್ಮೆಯ ಕುರುವಿಗೆ ಗಾಯಗೊಳಿಸಿದ ಚಿರತೆ ಭಯದ ವಾತಾವರಣ ಸೃಷ್ಟಿಸಿತ್ತು. ಹೀಗಾಗಿ ಐದು ದಿನಗಳ ಹಿಂದೆ ಅರಣ್ಯ ಇಲಾಖೆ ವತಿಯಿಂದ ಬೋನು ಇರಿಸಲಾಗಿತ್ತು.
ಸೋಮವಾರ ಬೆಳಗ್ಗೆ ಬೋನಿಗೆ ಬಿದ್ದ ಚಿರತೆಯನ್ನು ನೋಡಲು ಸ್ಥಳೀಯ ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಸಂಜೆ ವೇಳೆ ಈ ಚಿರತೆಯನ್ನು ಮುಮ್ಮಡಿ ಕಾವಲಿನ ಮೀಸಲು ಅರಣ್ಯ ಪ್ರದೇಶಕ್ಕೆ ಬಿಡುವ ಸಂದರ್ಭದಲ್ಲಿ ಅದು ಮೃತಪಟ್ಟಿರುವುದು ಅರಣ್ಯ ಸಿಬ್ಬಂದಿ ಗಮನಕ್ಕೆ ಬಂದಿದೆ. ನಂತರ ನಾಗರಹೊಳೆ ಅಭಯಾರಣ್ಯದ ವೈದ್ಯಾಧಿಕಾರಿ ಡಾ.ರಮೇಶ್ ಮರಣೋತ್ತರ ಪರೀಕ್ಷೆ ನಡೆಸಿ, ಸಮೀಪದ ಮಾಲಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಳೇಬರವನ್ನು ಸುಡಲಾಯಿತು.
ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಪತ್ತೆ: ಚಿರತೆಯು ಶ್ವಾಸಕೋಶದ ಸಮಸ್ಯೆಗೆ ತುತ್ತಾಗಿತ್ತು. ನಾಲ್ಕು ದಿನಗಳಿಂದ ಅದಕ್ಕೆ ಆಹಾರ ಸಿಕ್ಕಿರಲಿಲ್ಲ ಮತ್ತು ಅದರ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಪದಾರ್ಥಗಳು ಸೇರಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ ಎಂದು ನಾಗರಹೊಳೆ ಅಭಯಾರಣ್ಯದ ವೈದ್ಯಾಧಿಕಾರಿ ಡಾ.ರಮೇಶ್ ಮಾಹಿತಿ ನೀಡಿದ್ದಾರೆ,. ಅಲ್ಲದೆ ಚಿರತೆಯು ಬೋನಿನಿಂದ ಬಿಡಿಸಿಕೊಳ್ಳಲು ಯತ್ನಿಸಿದಾಗ ಅದರ ತಲೆ ಭಾಗಕ್ಕೆ ಸ್ವಲ್ಪ ಪ್ರಮಾಣದಲ್ಲಿ ಸ್ವಲ್ಪ ಪೆಟ್ಟು ಬಿದ್ದಿತ್ತು. ರಕ್ತ ಮಾದರಿಯನ್ನು ಮೈಸೂರು ಲ್ಯಾಬ್‌ಗೆ ಕಳುಹಿಸಲಾಗಿದೆ ಎಂದು ಪಿರಿಯಾಪಟ್ಟಣ ಆರ್‌ಎಫ್‌ಒ ವಿಜಯವಾಣಿಗೆ ತಿಳಿಸಿದ್ದಾರೆ.