

ಬೆಂಗಳೂರು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಮೊದಲ ಬಾರಿಗೆ ನಡೆಸಲಾದ ಪೀಡಿಯಾಟ್ರಿಕ್ ಅಲೋಜೆನಿಕ್ ಬೋನ್‌ಮ್ಯಾರೋ ಟ್ರಾನ್ಸ್‌ಪ್ಲಾಂಟೇಷನ್ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಿದ್ವಾಯಿ ಆಸ್ಪತ್ರೆಯ ಬೋನ್‌ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಘಟಕಕ್ಕೆ (ಬಿಎಂಟಿ) ಶುಕ್ರವಾರ ಭೇಟಿ ನೀಡಿ ಕಸಿ ಶಸಚಿಕಿತ್ಸೆಗೆ ಒಳಗಾಗಿದ್ದ ಬಾಲಕಿಯ ಆರೋಗ್ಯ ವಿಚಾರಿಸಿದರು. ಇಷ್ಟು ಕ್ಲಿಷ್ಟಕರವಾದ ಚಿಕಿತ್ಸೆಯನ್ನು ಸಂಸ್ಥೆಯ ವೈದ್ಯರು ಯಶಸ್ವಿಯಾಗಿ ನಡೆಸಿದ್ದಾರೆ. ಅಗತ್ಯ ಇರುವ ಇನ್ನಷ್ಟು ಮಕ್ಕಳಿಗೆ ಈ ಸೇವೆ ದೊರೆತು ಕ್ಯಾನ್ಸರ್‌ನಿಂದ ಗುಣ ಹೊಂದಲಿ ಎಂದು ಆಶಿಸಿದರು.
ಇದೇ ವೇಳೆ ಆಸ್ಪತ್ರೆಯ ಇತರೆ ವಿಭಾಗಗಳಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಆಡಳಿತಾಧಿಕಾರಿ ಎನ್. ಮಂಜುಶ್ರೀ, ನಿರ್ದೇಶಕ ಡಾ. ಲೋಕೇಶ್, ಸಂಸ್ಥೆಯ ವೈದ್ಯರು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದರು.
ಯಶಸ್ವಿ ಕಸಿ ಶಸಚಿಕಿತ್ಸೆ: ಲ್ಯುಕೆಮಿಯಾ ಎಂಬ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಡ ಕುಟುಂಬದ 14 ವರ್ಷದ ಬಾಲಕಿಯನ್ನು ಎರಡು ತಿಂಗಳ ಹಿಂದೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಅಸ್ತಿಮಜ್ಜೆ ಕಸಿ ಶಸಚಿಕಿತ್ಸಾ ಘಟಕಕ್ಕೆ ದಾಖಲಿಸಲಾಗಿತ್ತು. ಕಿರಿಯ ಸಹೋದರನ ಕಾಂಡಕೋಶ (ಬೋನ್ ಮ್ಯಾರೋ) ದಾನವಾಗಿ ಪಡೆದು ಬಾಲಕಿಗೆ ಕಸಿ ಶಸಚಿಕಿತ್ಸೆ ನಡೆಸಲಾಯಿತು. ಮಕ್ಕಳ ಕ್ಯಾನ್ಸರ್ ತಜ್ಞೆ ಡಾ. ವಸುಂಧರಾ ಕೈಲಾಸನಾಥ್ ನೇತೃತ್ವದ ವೈದ್ಯರ ತಂಡ ಯಶಸ್ವಿಯಾಗಿ ಶಸಚಿಕಿತ್ಸೆ ನಡೆಸಿದೆ. ಸಂಸ್ಥೆಯಲ್ಲಿ 2022ರಲ್ಲಿ ಪೀಡಿಯಾಟ್ರಿಕ್ ಬಿಎಂಟಿ ಸ್ಥಾಪಿಸಲಾಗಿದ್ದು, ಈವರೆಗೂ ಮಕ್ಕಳು ಹಾಗೂ ವಯಸ್ಕರೂ ಸೇರಿ 90 ಮಂದಿಗಿ ಕಸಿ ಶಸಚಿಕಿತ್ಸೆ ನಡೆಸಲಾಗಿದೆ.