

ಕಾರವಾರ: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಕಾಣೆಯಾದವರ ಹುಡುಕಾಟಕ್ಕೆ ಗಂಗಾವಳಿ ನದಿಯಲ್ಲಿ ನಡೆದ ಕಾರ್ಯಾಚರಣೆಯ ವೇಳೆ ಸಿಕ್ಕ ಎರಡು ಮೂಳೆಗಳು ಯಾರವು ಎಂಬುದು ಇದುವರೆಗೂ ಖಚಿತವಾಗಿಲ್ಲ.
ಗಂಗಾವಳಿ ನದಿಯಲ್ಲಿ ಹೂಳೆತ್ತುವ ಕಾರ್ಯಾಚರಣೆ ನಡೆಸುವ ಸಂದರ್ಬದಲ್ಲಿ ಸೆ.30 ರಂದು ಮನುಷ್ಯರೊಬ್ಬರ ಪಕ್ಕೆಲುಬಿನ ಒಂದು ಹಾಗೂ ಕಾಲಿನ ಒಂದು ಮೂಳೆದೊರಕಿತ್ತು. ನದಿಯ ಆಳದಿಂದ ಅವುಗಳನ್ನು ಸಂಗ್ರಹಿಸಲಾಗಿತ್ತು. ಅಂಕೋಲಾ ಆಸ್ಪತ್ರೆಯ ವೈದ್ಯರು ಮೂಳೆಗಳ ಮಾದರಿಯನ್ನು ಹುಬ್ಬಳ್ಳಿಯ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ದರು. ಸಾಮಾನ್ಯವಾಗಿ ಎರಡು ಅಥವಾ ಮೂರು ದಿನಗಳಲ್ಲಿ ವರದಿ ಬರುತ್ತದೆ. ಆದರೆ, ಈಗ 9 ದಿನ ಕಳೆದರೂ ವರದಿ ಬಂದಿಲ್ಲ. ಇನ್ನೂ 10 ರಿಂದ 15 ದಿನ ಬೇಕಾಗಬಹುದು ಎಂದು ಪ್ರಯೋಗಾಲಯದಿಂದ ತಿಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ವಿಜಯವಾಣಿಗೆ ತಿಳಿಸಿದ್ದಾರೆ.
ಮೂಳೆಗಳನ್ನು ಸಂಸ್ಕರಿಸುವ ಸಂದರ್ಭದಲ್ಲಿ ರಾಸಾಯನಿಕವೊಂದರಲ್ಲಿ ಮುಳುಗಿಸಿದ್ದರಿಂದ ಡಿಎನ್‌ಎ ಖಚಿತಪಡಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಪ್ರಯೋಗಾಲಯದ ತಂತ್ರಜ್ಞರು ತಿಳಿಸುತ್ತಿದ್ದಾರೆ. ಇನ್ನಷ್ಟು ಕಾಲಾವಕಾಶ ಕೋರಿದ್ದು, ನಂತರವೇ ಖಚಿತವಾಗಬೇಕಿದೆ ಎಂದು ಡಿಸಿ ತಿಳಿಸಿದ್ದಾರೆ.
ಶಿರೂರು ಗುಡ್ಡ ಕುಸಿತದ ವೇಳೆ ನಾಪತ್ತೆಯಾಗಿದ್ದ 11 ಜನರ ಪೈಕಿ 8 ಜನರ ದೇಹಗಳು ಮೊದಲ 10 ದಿನಗಳಲ್ಲಿ ಪತ್ತೆಯಾಗಿದ್ದವು. ಮೂವರ ಸುಳಿವಿರಲಿಲ್ಲ. ಇದರಿಂದ 95 ಲಕ್ಷ ಖರ್ಚು ಮಾಡಿ ಗೋವಾದಿಂದ ಬಾರ್ಜ್ ಹಾಗೂ ಡ್ರಜ್ಜಿಂಗ್ ಯಂತ್ರವನ್ನು ತರಿಸಿ ಗಂಗಾವಳಿ ನದಿಯ ಆಳದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಒಂದು ಬೆಂಜ್ ಲಾರಿ ಹಾಗೂ ಅದರಲ್ಲಿ ಕೇರಳದ ಚಾಲಕನ ಅರ್ಜುನ್ ಮೃತ ದೇಹ ಪತ್ತೆಯಾಗಿತ್ತು. ಡಿಎನ್‌ಎ ಪರೀಕ್ಷೆಯ ಮೂಲಕ ದೇಹ ಅರ್ಜುನ್ ಅವರದ್ದೇ ಎಂಬುದೂ ಖಚಿತವಾಗಿತ್ತು. ಆದರೆ, ಸ್ಥಳೀಯ ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಇನ್ನೂ ನಾಪತ್ತೆಯಾಗಿದ್ದು, ಅವರ ಅಸ್ತಿಯನ್ನಾದರೂ ತಂದು ಕೊಡಿ ಎಂದು ಕುಟುಂಬದವರು ಗೋಗರೆಯುತ್ತಿದ್ದಾರೆ. ಅಲ್ಲದೇ, ಇಬ್ಬರು ದುರ್ಘಟನೆಯಲ್ಲಿ ಮೃತಪಟ್ಟಿರುವುದು ದಾಖಲಾತಿಯಂತೆ ಖಚಿತವಾಗದ ಕಾರಣ ಅವರ ಕುಟುಂಬಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಘೋಷಿತ ಪರಿಹಾರವನ್ನೂ ನೀಡಲು ಸಾಧ್ಯವಾಗುತ್ತಿಲ್ಲ.
ಸೆ.30 ರಂದು ಎರಡು ಅಸ್ತಿಗಳು ಸಿಕ್ಕಿದ್ದು, ಡಿಎನ್‌ಎ ಪರೀಕ್ಷೆಯಿಂದ ಮಾತ್ರ ಅವು ಯಾರ ಅಸ್ತಿಗಳು ಎಂಬುದನ್ನು ಖಚಿತಪಡಿಸುಬಹುದಾಗಿದೆ. ಜಗನ್ನಾಥ ನಾಯ್ಕ ಅವರದ್ದೋ..? ಲೋಕೇಶ ನಾಯ್ಕ ಅವರದ್ದೋ..? ಅಥವಾ ದೇಹದ ಮೇಲ್ಭಾಗ ಮಾತ್ರ ಸಿಕ್ಕಿದ್ದ ತಮಿಳುನಾಡಿನ ಟ್ಯಾಂಕರ್ ಚಾಲಕನದ್ದೋ..? ಎಂಬುದು ಈಗ ಡಿಎನ್‌ಎ ಪರೀಕ್ಷೆ ಮಾಡಲಾಗುತ್ತಿದೆ. ಇದರಿಂದ ಈ ಪರೀಕ್ಷೆಯ ಬಗ್ಗೆಯೇ ಎಲ್ಲರ ಲಕ್ಷ÷್ಯ ನೆಟ್ಟಿದೆ. ಹಾಗೊಮ್ಮೆ ಮೂಳೆಗಳು ಯಾರವು ಎಂಬುದು ಡಿಎನ್‌ಎಯಲ್ಲಿ ಖಚಿತವಾಗದೇ ಹೋದರೆ 95 ಲಕ್ಷದ ಕಾರ್ಯಾಚರಣೆ ವ್ಯರ್ಥವಾಗಲಿದೆ. ಮಾತ್ರವಲ್ಲ ನಾಪತ್ತೆಯಾದವರ ಕುಟುಂಬಗಳಿಗೆ ಪರಿಹಾರ ನೀಡಲೂ ತಾಂತ್ರಿಕ ಸಮಸ್ಯೆ ಉಂಟಾಗಲಿದೆ.
ಶಿರೂರಿನ ಗಂಗಾವಳಿ ನದಿಯಲ್ಲಿ ಸಿಕ್ಕ ಮೂಳೆಗಳು ಯಾರವು ಎಂಬುದು ಇನ್ನೂ ಖಚಿತವಾಗಿಲ್ಲ. ಇನ್ನೂ ಕೆಲ ದಿನ ಕಾಲಾವಕಾಶವನ್ನು ಹುಬ್ಬಳ್ಳಿಯ ಪ್ರಾದೇಶಿಕ ವಿಽ ವಿಜ್ಞಾನ ಪ್ರಯೋಗಾಲಯದವರು ಕೋರುತ್ತಿದ್ದಾರೆ.ಕೆ.ಲಕ್ಷ್ಮೀಪ್ರಿಯಾ ಜಿಲ್ಲಾಧಿಕಾರಿ ಉತ್ತರ ಕನ್ನಡ https://www.vijayavani.net/a-lorry-carrying-a-bag-of-manure-was-seized https://www.vijayavani.net/a-lorry-carrying-a-bag-of-manure-was-seized