

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಜನರ ಆರೋಗ್ಯ ಕಾಳಜಿ ದೃಷ್ಟಿಯಿಂದ 50 ವರ್ಷಗಳ ಹಿಂದೆ ಎಸ್‌ಡಿಎಂ ಮೆಡಿಕಲ್ ಟ್ರಸ್ಟ್ ಸ್ಥಾಪಿಸಿ ಸಂಚಾರಿ ಆಸ್ಪತ್ರೆ ಮೂಲಕ ಹಳ್ಳಿಯ ಜನರ ಆರೋಗ್ಯ ರಕ್ಷಣೆಗೆ ವ್ಯವಸ್ಥೆ ಕಲ್ಪಿಸಿದರು. ಉಜಿರೆಯಂತಹ ಗ್ರಾಮೀಣ ಭಾಗದಲ್ಲಿ ಎಸ್‌ಡಿಎಂ ಆಸ್ಪತ್ರೆ ನಿರ್ಮಿಸಿ ಮಂಗಳೂರಿಗೆ ರೋಗಿಗಳು ಅಲೆದಾಡುವ ಸಂಕಷ್ಟ ನಿವಾರಿಸಿದರು. ಡಾ.ಹೆಗ್ಗಡೆಯವರ ಆಶಯದಂತೆ ಅತ್ಯಾಧುನಿಕ ವೈದ್ಯಕೀಯ ಸೇವೆ ನೀಡುತ್ತಿರುವ ಉಜಿರೆ ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸೇವೆ ನಿರಂತರ ನಡೆಯಲಿ ಎಂದು ಉಜಿರೆ ಎಸ್.ಡಿ.ಎಂ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಹೇಳಿದರು.
ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ಮಾತನಾಡಿ, ಸಮಾಜಕ್ಕೆ ಸದುಪಯೋಗವಾಗುವ ಯಾವ ಕಾರ್ಯವಿದ್ದರೂ ಡಾ.ಹೆಗ್ಗಡೆಯವರು ಅತ್ಯಂತ ಆಸಕ್ತಿಯಿಂದ ಅನುಮತಿ ನೀಡುವುದರಿಂದ ನಮಗೆ ಇಂತಹ ಉಚಿತ ಶಿಬಿರಗಳನ್ನು ನಡೆಸಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮೂಳೆಯ ಸಮಸ್ಯೆ ಜಾಸ್ತಿಯಾಗಿ ಕಂಡುಬರುತ್ತಿರುವುದರಿಂದ ಈ ಶಿಬಿರ ಆಯೋಜಿಸಲಾಗಿದೆ ಎಂದರು.
ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಸಾತ್ವಿಕ್ ಜೈನ್ ಮಾತನಾಡಿದರು. ಆಸ್ಪತ್ರೆ ವೈದ್ಯಕೀಯ ಅಧೀಕ್ಷ ಮತ್ತು ಮೂಳೆ ಚಿಕಿತ್ಸಾತಜ್ಞ ಡಾ.ದೇವೇಂದ್ರ ಕುಮಾರ್ ಪಿ., ಮೂಳೆ ಚಿಕಿತ್ಸಾತಜ್ಞ ಡಾ.ಪ್ರತೀಕ್ಷ್ ಪಿ., ಡಾ.ಹರೀಶ್ ಬಿ.ಎಸ್., ಡಾ.ಶತಾನಂದ ಪ್ರಸಾದ್ ರಾವ್, ಡಾ.ರಜತ್ ಎಚ್.ಪಿ. ಮೂಳೆ ಸಾಂದ್ರತೆ ತಪಾಸಣೆ ಬಗ್ಗೆ ವಿವರಿಸಿದರು. ಆಸ್ಪತ್ರೆಯ ಸ್ಟೋರ್ ಮ್ಯಾನೇಜರ್ ಜಗನ್ನಾಥ ಕಾರ್ಕ್ರಮ ನಿರೂಪಿಸಿದರು. ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಸುಮಂತ್ ರೈ ಹಾಗೂ ಸಂಪರ್ಕಾಧಿಕಾರಿ ಚಿದಾನಂದ ಸಹಕರಿಸಿದರು.
425 ಮಂದಿ ಭಾಗಿ
ಶಿಬಿರದಲ್ಲಿ ಉಚಿತ ವೈದ್ಯರ ಸಮಾಲೋಚನೆ, ಉಚಿತ ಮೂಳೆ ಸಾಂದ್ರತೆ ಪರೀಕ್ಷೆ, ಉಚಿತ ಎಕ್ಸ್‌ರೇ, ಒಳರೋಗಿ ವಿಭಾಗದಲ್ಲಿ ಸರ್ಜರಿ ಮೇಲೆ ಶೇ.10 ರಿಯಾಯಿತಿ, ಹೊರರೋಗಿ ವಿಭಾಗದಲ್ಲಿ ರಕ್ತ ಪರೀಕ್ಷೆ ಮತ್ತು ರೆಡಿಯೋಲಾಜಿ ಪರೀಕ್ಷೆಯಲ್ಲಿ ಶೇ.20 ರಿಯಾಯಿತಿ, ಔಷಧದಲ್ಲಿ ಶೇ.10 ರಿಯಾಯಿತಿ ನೀಡಲಾಯಿತು.