

ಗೋಣಿಕೊಪ್ಪ: ಕ್ರೀಡೆ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಅಂಶವಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಬಾಂಧವ್ಯ ವೃದ್ಧಿಯಾಗುತ್ತದೆ. ಇಂತಹ ಕ್ರೀಡಾ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜನೆ ಮಾಡಬೇಕು ಎಂದು ಮಡಿಕೇರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶ ಎಚ್.ಸಿ.ಶಾಮ್ಪ್ರಸಾದ್ ಹೇಳಿದರು.
ಕೊಡಗು ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಸಂಘ, ಮಡಿಕೇರಿ, ವಿರಾಜಪೇಟೆ ಸೋಮವಾರಪೇಟೆ ಕುಶಾಲನಗರ, ಪೊನ್ನಂಪೇಟೆ ಮತ್ತು ಕೊಡಗು ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ನಾಲ್ಕು ಗೋಡೆಗಳ ಮಧ್ಯೆ ಕೆಲಸದ ಒತ್ತಡದಿಂದ ಬೇರ್ಪಟ್ಟು ಕ್ರೀಡಾ ಮನೋಭಾದಿಂದ ಬಾಂಧವ್ಯ ವೃದ್ಧಿಸಲು ಹಾಗೂ ಪರಸ್ಪರ ಪರಿಚಯ ಮಾಡಿಕೊಳ್ಳಲು ಕ್ರೀಡಾಕೂಟಗಳು ಸಹಕಾರಿಯಾಗಿವೆೆ. ಕ್ರೀಡೆ ಮನುಷ್ಯನನ್ನು ಮಾನಸಿಕವಾಗಿ, ಶಾರೀರಿಕವಾಗಿ ಸದೃಢಗೊಳಿಸಲು ಸಹಕಾರಿಯಾಗಿದೆ. ಹುಮ್ಮಸ್ಸಿನಿಂದ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಬಹುಮುಖ ಪ್ರತಿಭೆಗಳನ್ನು ಅನಾವರಣ ಮಾಡುವ ವೇದಿಕೆಗಳಾಗಿವೆ. ಸೋಲು- ಗೆಲುವುಗಳನ್ನು ಸಮಾನ ಪ್ರಮಾಣದಲ್ಲಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.
ವಿರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಕೆ.ಜಿ.ಅಪ್ಪಣ್ಣ ಮಾತನಾಡಿ, ಕೀಡೆಗಳಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ. ನ್ಯಾಯಾಂಗ ಇಲಾಖೆಯ ನೌಕಕರು ಕೆಲಸ ಒತ್ತಡ ನಡುವೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ನೌಕರರಿಗೆ ವಾಲಿಬಾಲ್, ಥ್ರೋಬಾಲ್, ಓಟದ ಸ್ಪರ್ಧೆ ಮತ್ತು ಕ್ರಿಕೆಟ್ ಸ್ಪರ್ಧೆಗಳು ನಡೆಯಿತು. ವೇದಿಕೆಯಲ್ಲಿ ಪೊನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷ ಕೆ.ಡಿ.ಮುತ್ತಪ್ಪ, ಕೊಡಗು ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೋಯಪ್ಪ, ಮಡಿಕೇರಿ ನ್ಯಾಯಾಧೀಶರಾದ ಮಂಜುನಾಥ್, ನಾಗೇಶ್, ಆಡಳಿತಾಧಿಕಾರಿಗಳಾದ ಕೆಂಪರಾಜು, ಪ್ರಶಾಂತಿ, ವಿರಾಜಪೇಟೆ ನ್ಯಾಯಾಧೀಶ ಸಂತೋಷ್ ಕೊಠಾರಿ, ಪ್ರದೀಪ್, ಪೋತೆಧಾರ್, ವಕೀಲ ಸಂಘದ ಕಾರ್ಯದರ್ಶಿ ವಿ.ಜಿ.ರಾಕೇಶ್, ಪೊನ್ನಂಪೇಟೆ ನ್ಯಾಯಧೀಶ ಶಿವರಾಜ್ ಬಂಡಿ, ಮುಂತಾದವರು ಉಪಸ್ಥಿತರಿದ್ದರು.