

ಚನ್ನರಾಯಪಟ್ಟಣ : ಕನ್ನಡ ಸಾಹಿತ್ಯ ಪರಿಷತ್ ಹಿರಿಸಾವೆ ಹೋಬಳಿ ಮಾಜಿ ಅಧ್ಯಕ್ಷ ಹಾಗೂ ತಾಲೂಕಿನ ಉಪಾಧ್ಯಕ್ಷ ಭೂಕ ಬೊಮ್ಮೇಗೌಡರ ಅವರ ನಿಧನಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪಟ್ಟಣದ ಪುರಸಭೆ ಆವರಣದಲ್ಲಿರುವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎಲ್.ಮಲ್ಲೇಗೌಡ ಮಾತನಾಡಿ, ಜಿಲ್ಲೆಯ ಸಾಹಿತ್ಯ ಲೋಕಕ್ಕೆ ಬೊಮ್ಮೇಗೌಡ ಅವರ ಕೊಡುಗೆ ಅಪಾರ. ಭೂಕ ಬೊಮ್ಮೇಗೌಡರವರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ತಾಲೂಕಿನ ಹಲವಾರು ಸಂಘ ಸಂಸ್ಥೆಗಳಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರ ಅಗಲಿಕೆ ಕನ್ನಡ ಸಾಹಿತ್ಯ ಪರಿಷತ್ತಿಗೆ ತುಂಬಲಾರದ ನಷ್ಟವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ಪಿಎಪಿಸಿಎಂಎಸ್‌ನ ಅಧ್ಯಕ್ಷ ಅನಿಲ್ ಮರಗೂರು, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಬೊಮ್ಮೆಗೌಡ, ತಾಲೂಕು ಗೌರವ ಕಾರ್ಯದರ್ಶಿಗಳಾದ ಶಿವನಗೌಡ. ಪಾಟೀಲ್, ಗೋವಿಂದರಾಜ ದಿಂಡಗೂರು, ಗೌರವ ಕಾರ್ಯದರ್ಶಿ ಮುಳುಕೆರೆ ಪ್ರಕಾಶ್, ಸಾಹಿತಿ ಹೊನ್ನಶೆಟ್ಟಿಹಳ್ಳಿ ಗಿರಿರಾಜ, ಉಪಾಧ್ಯಕ್ಷ ಮಲ್ಲೇಗೌಡ, ಸಂಘಟನಾ ಕಾರ್ಯದರ್ಶಿ ಜಬಿವುಲ್ಲಾಬೇಗ್, ಮಾಧ್ಯಮ ಕಾರ್ಯದರ್ಶಿ ನಂದನ್ ಪುಟ್ಟಣ್ಣ, ಮಹಿಳಾ ಪದಾಧಿಕಾರಿಗಳಾದ ಯಶೋದಾ ಜೈನ್, ಸುಜಾತಾ ಸೇರಿದಂತೆ ಇತರರು ಭಾಗವಹಿಸಿದ್ದರು.