

ಹಾನಗಲ್ಲ: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಬೊಮ್ಮನಹಳ್ಳಿ-ಸವಣೂರ ನೂತನ ಮಾರ್ಗದ ಬಸ್ ಸೇವೆಗೆ ಶಾಸಕ ಶ್ರೀನಿವಾಸ ಮಾನೆ ಹಸಿರು ನಿಶಾನೆ ತೋರಿದರು.
ಈ ಮಾರ್ಗದಲ್ಲಿ ಬಸ್ ಓಡಿಸಬೇಕು ಎನ್ನುವ ಬಹುದಿನಗಳ ಬೇಡಿಕೆ ಈಡೇರಿದೆ. ಸವಣೂರ, ಶಿಗ್ಗಾಂವಿ ಮತ್ತು ಹಾನಗಲ್ಲ ತಾಲೂಕಿನ ಜನತೆಗೆ ಇದರಿಂದ ಅನುಕೂಲವಾಗಲಿದೆ. ಎರಡು ವರ್ಷಗಳಲ್ಲಿ ಒಟ್ಟು 14 ಹೊಸ ಬಸ್ ಒದಗಿಸಲಾಗಿದ್ದು, ಇದರಿಂದ ಹೊಸ, ಹೊಸ ಮಾರ್ಗಗಳಲ್ಲಿ ಬಸ್ ಓಡಿಸಲು ಅನುಕೂಲವಾಗಿದೆ. ಮತ್ತಷ್ಟು ಹೊಸ ಬಸ್ ನೀಡುವಂತೆ ಸಾರಿಗೆ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಶಾಸಕ ಮಾನೆ ತಿಳಿಸಿದರು.
ಬಸ್ ಪ್ರತಿದಿನ ಬೆಳಗ್ಗೆ 5.45 ಕ್ಕೆ ಬೊಮ್ಮನಹಳ್ಳಿ ಗ್ರಾಮದಿಂದ ಲಕ್ಕಿಕೊಪ್ಪ, ದೇವರ ಹೊಸಪೇಟೆ, ಹೋತನಹಳ್ಳಿ, ಮಾಸನಕಟ್ಟಿ, ವಳಗೇರಿ, ಗುಡ್ಡದಚನ್ನಾಪುರ, ಬಂಕಾಪುರ ಮಾರ್ಗವಾಗಿ ಸವಣೂರ ತಲುಪಲಿದ್ದು, ರಾತ್ರಿ 8 ಗಂಟೆಗೆ ಇದೇ ಮಾರ್ಗದಿಂದ ವಾಪಸ್ ಬೊಮ್ಮನಹಳ್ಳಿಗೆ ಆಗಮಿಸಲಿದೆ.
ಶಿಗ್ಗಾಂವಿ ಶಾಸಕ ಯಾಸೀರಖಾನ್ ಪಠಾಣ, ತಹಸೀಲ್ದಾರ್ ಎಸ್. ರೇಣುಕಾ, ಕೆಡಿಪಿ ಸದಸ್ಯ ಮಹ್ಮದಹನೀಫ್ ಬಂಕಾಪೂರ, ಗ್ರಾಪಂ ಸದಸ್ಯರಾದ ಅರುಣ ಮಲ್ಲಮ್ಮನವರ, ಪತಂಗಸಾಬ್ ಮಕಾನದಾರ, ರಾಮಣ್ಣ ವಡ್ಡರ, ಲಕ್ಷ್ಮೀ ಕಲಾಲ, ಗದಿಗೆವ್ವ ಚಿಕ್ಕಣಗಿ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಪದ್ಮಾ ಬೇಂದ್ರೆ, ಮುಖಂಡರಾದ ಚನ್ನಬಸಣ್ಣ ಬಿದರಗಡ್ಡಿ, ನಾಗರಾಜ ಮಲ್ಲಮ್ಮನವರ, ಮಲ್ಲನಗೌಡ ಪಾಟೀಲ, ಚಮನಸಾಬ್ ಪಾಟೀಲ, ಮಲ್ಲೇಶಪ್ಪ ಕ್ಷೌರದ, ರಾಮಣ್ಣ ರಾಮಜಿ, ಮಾರುತಿ ಮುದುಕಣ್ಣನವರ, ಹನುಮಂತಪ್ಪ ಮರಗಡಿ, ಮಂಜು ಗೊರಣ್ಣನವರ, ಚಂದ್ರಪ್ಪ ಜಾಲಗಾರ, ಈರಣ್ಣ ಬೈಲವಾಳ, ಭರಮಣ್ಣ ಶಿವೂರ, ಆದರ್ಶ ಶೆಟ್ಟಿ ಇತರರಿದ್ದರು.