ಹಿಂದುಳಿದ ವರ್ಗಗಳಿಗೆ ಬೊಮ್ಮಾಯಿ ಕೊಡುಗೆ ಶೂನ್ಯ

Bommai's contribution to backward classes is nil
Published on

ಶಿಗ್ಗಾಂವಿ: ಕಳೆದ 15 ವರ್ಷಗಳಿಂದ ಹಿಂದುಳಿದ ವರ್ಗಗಳ ಬೆಂಬಲದಿಂದ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಅವರು ತಮ್ಮ ಆಡಳಿತ ಅವಧಿಯಲ್ಲಿ ಹಿಂದುಳಿದ ವರ್ಗಗಳಿಗೆ ಕೊಟ್ಟ ಕೊಡುಗೆ ಶೂನ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಥೋಡ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿಗ್ಗಾಂವಿ ತಾಲೂಕಿನಲ್ಲಿ ಲಂಬಾಣಿ ಸಮುದಾಯಗಳಿರುವ ಹಳ್ಳಿಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತಗಳು ಬಂದಿದ್ದು, ಕಳೆದ 15 ದಿನಗಳಿಂದ ನಾವು ಕ್ಷೇತ್ರದಲ್ಲಿ ಪ್ರಚಾರ ಮಾಡಿ ಸಮುದಾಯ ಒಗ್ಗೂಡಿಸಿದ್ದೇವೆ. ಈ ಉಪಚುನಾವಣೆಯಲ್ಲಿಯೂ ಸಮಾಜ ಕಾಂಗ್ರೆಸ್ ಪರವಾಗಿದ್ದು, ಇಲ್ಲಿ ನಮ್ಮ ಅಭ್ಯರ್ಥಿ ಯಾಸೀರ್​ಖಾನ್ ಪಠಣ ಗೆಲುವು ನಿಶ್ಚಿತ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಲಂಬಾಣಿ ಜನಾಂಗದವರಿಗೆ ಹಕ್ಕುಪತ್ರಗಳನ್ನು ಕೊಡುತ್ತೇವೆಂದು ಹೇಳಿ ಮೋಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ಘೊಷಣೆ ಮಾಡಿದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ. ಅದರಂತೆ, ಲಂಬಾಣಿ ಸಮುದಾಯಕ್ಕೆ ಕೊಟ್ಟ ಭರವಸೆಯಂತೆ ಮೀಸಲಾತಿ ಕಲ್ಪಿಸಿಕೊಡಲು ಸರ್ಕಾರ ಬದ್ಧವಾಗಿದೆ ಎಂದರು.

ಕಾಂಗ್ರೆಸ್ ಪಕ್ಷವು ಯಾವಾಗಲೂ ಹಿಂದುಳಿದ ವರ್ಗಗಳೊಂದಿಗೆ ಇರುವ ಪಕ್ಷ. ದೇಶದಲ್ಲಿ ಇಂದಿರಾಗಾಂಧಿಯವರ ಆಡಳಿತದಿಂದ ಇವತ್ತಿನ ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಆಡಳಿತದವರೆಗೂ ಲಂಬಾಣಿ ಜನಾಂಗಕ್ಕೆ ಹತ್ತು, ಹಲವು ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸಮುದಾಯದ ಬೆನ್ನಿಗೆ ನಿಂತಿದೆ. ಹೀಗಿರುವಾಗ ಕಾಂಗ್ರೆಸ್ ಪಕ್ಷದ ಋಣ ತೀರಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದ್ದು, ಈಗ ನಡೆಯುವ ಉಪಚುನಾವಣೆಯಲ್ಲಿ ಲಂಬಾಣಿ ಸಮಾಜ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕುವ ಮೂಲಕ ಪಕ್ಷದ ಋಣ ತೀರಿಸಬೇಕಾಗಿದೆ ಎಂದರು.

ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಬಾಲರಾಜ ನಾಯಕ್, ರಾಮಣ್ಣ ಲಮಾಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net