ರಾಜಕೀಯ ಲಾಭಕ್ಕಾಗಿ ಮಸೀದಿ ತೆರವುಗೊಳಿಸದ ಬೊಮ್ಮಾಯಿ

pramod muthalik shriramsena congress bjp politics murder case
Pramod muthalik
Published on

ಶಿಗ್ಗಾಂವಿ: ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಬಂಕಾಪುರ ಪಟ್ಟಣದಲ್ಲಿ ಜ್ವಲಂತವಾದಂತಹ ಒಂದು ಸಮಸ್ಯೆಯನ್ನು ಜೀವಂತವಾಗಿ ಇಟ್ಟಿದ್ದಾರೆ ಎಂದು ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಆರೋಪಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಕಾಪುರ ಪಟ್ಟಣದಲ್ಲಿ ಹಾಯ್ದು ಹೋಗಿರುವ ಕಾರವಾರ-ಇಳಕಲ್ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲಿರುವ ದರ್ಗಾವನ್ನು ತಮ್ಮ ಅಧಿಕಾರ ಅವಧಿಯಲ್ಲಿ ತೆರವುಗೊಳಿಸಲು ಬಸವರಾಜ ಬೊಮ್ಮಾಯಿ ಮುಂದಾಗಲಿಲ್ಲ. ರಸ್ತೆ ಅಗಲೀಕರಣ ಸಮಯದಲ್ಲಿ ಅಡ್ಡಲಾಗಿರುವ ದೇವಸ್ಥಾನ, ಮಸೀದಿ, ಚರ್ಚ್, ಅಂಗಡಿಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಆದೇಶ ಮಾಡಿದೆ. ಆದರೆ, ಜಿಲ್ಲಾಡಳಿತ ಮಸೀದಿ ತೆರವುಗೊಳಿಸದೆ ಹಾಗೆಯೇ ಬಿಟ್ಟಿದೆ. ಇದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ. ಹೀಗಾಗಿ ಶ್ರೀರಾಮ ಸೇನೆ ಇದರ ವಿರುದ್ಧ ‘ಚಲೋ ಬಂಕಾಪುರ’ ಎಂಬ ಹೋರಾಟವನ್ನು ಇದೇ ತಿಂಗಳು ಆರಂಭಿಸಲಿದೆ. ಸುಪ್ರೀಂ ಕೋರ್ಟ್ ಆದೇಶ ಪಾಲನೆಯಾಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು.

ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣ ಆದ ನಂತರ ಒಂದೇ ವಾರದಲ್ಲಿ ಇಂತಹ ಸುಮಾರು ಐದು ಪ್ರಕರಣ ಹುಬ್ಬಳ್ಳಿಯಲ್ಲಿ ನಡೆದವು. ಇದನ್ನು ಶ್ರೀರಾಮ ಸೇನೆ ಸಂಘಟನೆ ಗಂಭೀರವಾಗಿ ತೆಗೆದುಕೊಂಡು ಕೂಡಲೇ ರಾಜ್ಯ ಮಟ್ಟದ ಸಭೆ ಮಾಡಿ, ನಾಲ್ಕು ಕಡೆ ಸಹಾಯವಾಣಿ ತೆರೆಯಲಾಯಿತು. ಸಹಾಯವಾಣಿ ಆರಂಭಿಸಿದ ನಾಲ್ಕು ದಿನದಲ್ಲಿ ಲವ್ ಜಿಹಾದ್‌ಗೆ ಸಂಬಂಧಿಸಿದ ಸುಮಾರು 300 ಕರೆಗಳು ಬಂದಿವೆ. ಅದರಲ್ಲಿ ಸುಮಾರು ನೂರರಷ್ಟು ಬೆದರಿಕೆ ಕರೆಗಳಾಗಿದ್ದವು. ಸುಮಾರು 70 ಲವ್ ಜಿಹಾದ್ ಪ್ರಕರಣಗಳ 32 ಹುಡುಗಿಯರನ್ನು ಮರಳಿ ಕರೆತರಲಾಗಿದೆ ಎಂದರು.

ನಮ್ಮ ಸಹಾಯವಾಣಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಇಡೀ ದೇಶದಲ್ಲಿ ಮುಸ್ಲಿಂ ಸಮುದಾಯದವರು ತಮ್ಮ ಜನಸಂಖ್ಯೆ ಹೆಚ್ಚಳಕ್ಕಾಗಿ ಲವ್ ಜಿಹಾದ್‌ನಂತಹ ತಂತ್ರಗಾರಿಕೆಯಲ್ಲಿ ತೊಡಗಿಸಿದ್ದಾರೆ. ಇದನ್ನು ನಾವು ಗಂಭೀರವಾಗಿ ತೆಗೆದುಕೊಂಡು ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದೇವೆ. ಹಾವೇರಿ ಜಿಲ್ಲೆಯಲ್ಲಿಯೂ ಲವ್ ಜಿಹಾದ್ ಪ್ರಕರಣ ಹೆಚ್ಚಾಗುತ್ತಿವೆ. ಹೀಗಾಗಿ, ನಾವು ಮಹಿಳೆಯರಿಗೆ ಧೈರ್ಯ ತುಂಬುವ ಸಲುವಾಗಿ ಧಾರವಾಡದಲ್ಲಿ ಸುಮಾರು 50 ವಿದ್ಯಾರ್ಥಿನಿಯರಿಗೆ ತ್ರಿಶೂಲ ದೀಕ್ಷೆ ನೀಡಿದ್ದೇವೆ. ಈ ಕಾರ್ಯಕ್ರಮ ಯಶಸ್ವಿಯಾದ ನಂತರ ಸುಮಾರು ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರು ತ್ರಿಶೂಲ ದೀಕ್ಷೆ ಪಡೆಯಲು ಮುಂದೆ ಬಂದಿದ್ದಾರೆ. ರಾಜ್ಯಾದ್ಯಂತ ಸುಮಾರು 100 ಸ್ಥಳಗಳಲ್ಲಿ ತ್ರಿಶೂಲ ದೀಕ್ಷಾ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೇ ಒಂದು ಕಡೆ ಆಗಿದೆ. ಎಂಟು ಕಡೆ ತಯಾರಿ ನಡೆಯುತ್ತಿದೆ ಎಂದರು.

ಶ್ರೀರಾಮ ಸೇನೆ ಧಾರವಾಡ ವಿಭಾಗಾಧ್ಯಕ್ಷ ಗದಿಗೆಪ್ಪ ಕುರವೆತ್ತಿ, ಮುದಕಣ್ಣ ವನಹಳ್ಳಿ, ಸಿದ್ಧಾರೂಢ ವಿಭೂತಿಮಠ, ರಾಕೇಶ ರಾಯಣ್ಣವರ, ವಿನಾಯಕ ಇಚ್ಚಂಗಿ, ರಾಜು ಪೂಜಾರ, ಫಕೀರೇಶ ಕಾಳೆ ಹಾಗೂ ಶ್ರೀರಾಮ ಸೇನಾ ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net