ಮೋಸ ಮಾಡಿ ಪುತ್ರನಿಗೆ ಟಿಕೆಟ್ ಗಿಟ್ಟಿಸಿದ ಬೊಮ್ಮಾಯಿ

23 sgn 5
Published on

ಶಿಗ್ಗಾಂವಿ: ಶಾಸಕ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ರಾಜೀನಾಮೆ ಸಲ್ಲಿಸಿದ ನಂತರ ಕ್ಷೇತ್ರದಲ್ಲಿ ಮೂರ‌್ನಾಲ್ಕೂ ತಿಂಗಳಿನಿಂದ ಓಡಾಡಿದ ಸಂದರ್ಭದಲ್ಲಿ ಜನರು ತೋರಿದ ಪ್ರೀತಿ ವಿಶ್ವಾಸ ನೋಡಿ, ಮತ್ತಷ್ಟು ಸೇವೆ ಮಾಡುವ ಹಂಬಲ ಹೆಚ್ಚಿತು. ಈ ಕಾರಣಕ್ಕಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದೆ ಹೊರತು, ಬೇರೆ ಯಾವ ಆಸೆಯೂ ನನಗೆ ಇರಲಿಲ್ಲ ಎಂದು ಶ್ರೀಕಾಂತ ದುಂಡಿಗೌಡ್ರ ಹೇಳಿದರು.

ಪಟ್ಟಣದಲ್ಲಿ ಗುರುವಾರ ತಮ್ಮ ಬೆಂಬಲಿಗರ ಸಭೆ ನಡೆಸಿ ಅವರು ಮಾತನಾಡಿದರು. ಬಸವರಾಜ ಬೊಮ್ಮಾಯಿ ಸೂಚನೆಯ ಮೇರೆಗೆ ಕ್ಷೇತ್ರದಲ್ಲಿ ಓಡಾಡಿ ಪಕ್ಷದ ಸಂಟನೆ ಮಾಡಿದ್ದೆ. ಟಿಕೆಟ್ ಕೊಡುವ ಭರವಸೆ ನೀಡಿದ ಬಳಿಕ ಅವರ ಮಾತಿಗೆ ಬೆಲೆ ಕೊಟ್ಟು ಆಕಾಂಕ್ಷಿ ಆಗಿದ್ದೆ. ಬೇರಾವ ಉದ್ದೇಶ ಇರಲಿಲ್ಲ. ತಮ್ಮ ಮಗನನ್ನು ಯಾವತ್ತೂ ಚುನಾವಣೆಗೆ ನಿಲ್ಲಿಸುವುದಿಲ್ಲ ಎಂದು ಬಸವರಾಜ ಬೊಮ್ಮಾಯಿ ಅವರು ಹೇಳಿದ್ದರು. ಆದರೂ, ಹೈಕಮಾಂಡ್ ಮೂಲಕ ಟಿಕೆಟ್ ಗಿಟ್ಟಿಸಿಕೊಂಡು ಸುಳ್ಳು ಹೇಳಿದ್ದಾರೆ. ನನಗೆ ಮೋಸ ಮಾಡಿ, ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಿದ್ದಾರೆ ಎಂದರು.

ಬಸವರಾಜ ಬೊಮ್ಮಾಯಿ ಅವರು ಬಯಸಿದರೆ ನಮ್ಮ ಕುಟುಂಬಕ್ಕೆ ನೀಡಿರುವ ಸಾಂವಿಧಾನಿಕ ಹುದ್ದೆಗೆ ರಾಜೀನಾಮೆ ಕೊಡಲು ಸಿದ್ಧ. ನಮ್ಮ ಬಗ್ಗೆ ಅವರ ಮನದಲ್ಲಿರುವ ಸತ್ಯ ಸ್ಪಷ್ಟಪಡಿಸಬೇಕು. ತಮ್ಮ ಪುತ್ರನನ್ನು ಹೊರತುಪಡಿಸಿ ಕ್ಷೇತ್ರದ ಒಬ್ಬ ರೈತನಿಗೆ ಬಿಜೆಪಿ ಟಿಕೆಟ್ ಕೊಟ್ಟು ಚುನಾವಣೆ ಎದುರಿಸಲು ಬಸವರಾಜ ಬೊಮ್ಮಾಯಿ ಅವರು ಮುಂದಾದರೆ, ನಾನು ಅವರ ಜತೆಗೂಡಿ ಸಾಮಾನ್ಯ ರೈತನನ್ನು ಗೆಲ್ಲಿಸಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು.

ತಟಸ್ಥರಾಗಲು ನಿರ್ಧಾರ: ಮುಂದಿನ ನಡೆ ಕುರಿತು ತೀರ್ಮಾನಿಸಲು ಎಂಟು ಜನ ಸದಸ್ಯರ ಕೋರ್ ಕಮಿಟಿ ರಚಿಸಲಾಗಿತ್ತು. ಈ ಕಮಿಟಿ ಉಪಚುನಾವಣೆಯಲ್ಲಿ ಸ್ಪರ್ಧಿಸದೆ ತಟಸ್ಥರಾಗುವುದು ಹಾಗೂ ಸಮಾಜ ಸೇವೆ ಮುಂದುವರಿಸುವಂತೆ ತೀರ್ಮಾನ ಕೈಗೊಂಡಿತು. ಅದರಂತೆ ಶ್ರೀಕಾಂತ ದುಂಡಿಗೌಡ್ರ ಅವರು ಸ್ಪರ್ಧೆಯಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದರು.

ಹನುಮರಡ್ಡಿ ನಡುವಿನಮನಿ, ತಿಪ್ಪಣ್ಣ ಸಾತಣ್ಣನವರ, ಸಂಗಮೇಶ ಕಂಬಾಳಿಮಠ, ರಮೇಶ ಸಾತಣ್ಣನವರ, ಟಿವಿ ಸುರಾಗಿಮಠ, ಬಸವರಾಜ ನಾರಾಯಣಪುರ, ಭರಮಜ್ಜ ನವಲಗುಂದ, ಚಂದ್ರಣ್ಣ ಗುದಾಗಿ, ಮಲ್ಲೇಶಪ್ಪ ಚೋಟೆಪ್ಪನವರ, ನಿಂಗನಗೌಡ ಪಾಟೀಲ, ಬಸವರಾಜ ಮಿರ್ಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net