

ವಿಜಯವಾಣಿ ಸುದ್ದಿಜಾಲ ಉಡುಪಿ
ನಗರದ ಕುಂಜಿಬೆಟ್ಟುನಲ್ಲಿರುವ ಪ್ರತಿಷ್ಠಿತ ಶಾರದಾ ರೆಸಿಡೆನ್ಶಿಯಲ್ ಸ್ಕೂಲ್ಗೆ ಸೋಮವಾರ ಬೆಳಗ್ಗೆ ಬಾಂಬ್ ಬೆದರಿಕೆಯ ಸಂದೇಶ ಬಂದಿದ್ದು, ಉಡುಪಿಯಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಮಕ್ಕಳು, ಶಿಕ್ಷಕರು ಭಯದಿಂದ ಹೆದರಿ ಶಾಲೆಯಿಂದ ಹೊರಗೆ ಓಡಿ ಬಂದರು.
ಶಾಲೆಯ ಇ-ಮೇಲ್ಗೆ ತೊಲ್ಕಪ್ಪಿಯನ್ ತಿರುಮಾವಲವನ್ ಎಂಬ ಐಡಿಯಿಂದ ಬೆದರಿಕೆ ಸಂದೇಶ ಬಂದಿದ್ದು, ಶಾಲೆಯ ಪ್ರಾಂಶುಪಾಲ ವಿನ್ಸೆಂಟ್ ಡಿಕಾಸ್ಟ್ ಕೂಡಲೇ ಪೊಲೀಸ್ ಇಲಾಖೆಯ ಗಮನಕ್ಕೆ ತಂದರು. ಶಾಲೆಗೆ ದೌಡಾಯಿಸಿದ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಸಿಬ್ಬಂದಿ ಬಾಂಬ್ ಪತ್ತೆ ಕಾರ್ಯ ನಡೆಸಿದರು.
ಶಾಲೆಯ ಸುತ್ತಮುತ್ತ, ಶಾಲೆಯ ಕಟ್ಟಡ, ಶೌಚಾಲಯ, ತರಗತಿ ಹಾಗೂ ಸ್ಥಳದಲ್ಲಿದ್ದ ಎಲ್ಲ ವಾಹನಗಳನ್ನೂ ಪೊಲೀಸರು ತಪಾಸಣೆ ನಡೆಸಿದರು. ಆದರೆ, ಬಾಂಬ್ಗೆ ಸಂಬಂಧಪಟ್ಟ ಯಾವುದೇ ಸುಳಿವು ಅಥವಾ ಕುರುಹು ಲಭ್ಯವಾಗಿಲ್ಲ ಎಂದು ಪ್ರಭಾರ ಎಸ್ಪಿ ಸಿದ್ಧಲಿಂಗಪ್ಪ ಹಾಗೂ ಡಿವೈಎಸ್ಪಿ ಡಿ.ಟಿ. ಪ್ರಭು ಮಾಹಿತಿ ನೀಡಿದ್ದಾರೆ. ಶಾಲೆಯಲ್ಲಿ 600ಕ್ಕೂ ಅಧಿಕ ಮಕ್ಕಳು ಕಲಿಯುತ್ತಿದ್ದು, ಬೆದರಿಕೆ ಹಿನ್ನೆಲೆಯಲ್ಲಿ ಅವರನ್ನು ಶಾಲೆಯ ಮೈದಾನದಲ್ಲಿಟ್ಟು ರಕ್ಷಿಸಲಾಯಿತು.
ದೇಶದ ನಕ್ಸಲ್ ಚಟುವಟಿಕೆ ಹಾಗೂ ಭಯೋತ್ಪಾದಕ ವಿಚಾರಗಳನ್ನು ಇ-ಮೇಲ್ನಲ್ಲಿ ಉಲ್ಲೇಖಿಸಲಾಗಿದೆ. ಅಫ್ಜಲ್ ಗುರು ಗಲ್ಲು ವಿಚಾರ, ತಮಿಳುನಾಡಿನ ಅಣ್ಣ ವಿವಿಯ ಪ್ರೊಫೆಸರ್ ಚಿತ್ರಕಲಾ ಗೋಪಾಲನ್ ಘಟನೆ ಸೇರಿದಂತೆ ಇನ್ನಿತರ ವಿಷಯ ಉಲ್ಲೇಖಿಸಲಾಗಿದೆ. ಟ್ವಿನ್ಡ್ ಪೈಪ್ ಬಾಂಬ್ (ಐಇಡಿ) ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದು, ಇದು ನಮ್ಮ ಕೊನೆಯ ಕಾರ್ಯಾಚರಣೆಯಾಗಿದೆ. ಈ ಬ್ಲಾಸ್ಟ್ ಮೂಲಕ ನಾವು ಸ್ವರ್ಗ ಪಡೆಯುತ್ತೇವೆ. ಈ ಕಾರ್ಯಾಚರಣೆಯ ನಂತರ ಹಿಂದುಗಳ ಹೆಸರು ಅಳಿಯಲಿವೆ ಎಂದು ತಿಳಿಸಿದ್ದಾರೆ. ಸಂದೇಶದ ಕೊನೆಯಲ್ಲಿ ಅಲ್ಲಾಹು ಅಕ್ಬರ್ ಎಂದು ಬರೆಯಲಾಗಿದೆ.
ಶಾಲಾ ಕ್ಯಾಂಪಸ್ಗಳಲ್ಲಿ ನಕ್ಸಲ್ ಲೀಡರ್ ಟಿಎನ್ಎಲ್ಎ ಎಸ್.ಮಾರನ್ ಅವರು ಐಇಡಿ (ಬಾಂಬ್) ಇರಿಸಿದ್ದಾರೆ. ಎಲ್ಲ ಅಲ್ಪಸಂಖ್ಯಾತ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಶೀಘ್ರದಲ್ಲೇ ಸ್ಥಳಾಂತರಿಸಿ. ಈ ಪವಿತ್ರ ದಿನದಂದು, ನಿಮ್ಮ ಶಾಲೆಯು ಟ್ವಿನ್ಡ್ ಪೈಪ್ ಬಾಂಬ್ ಬ್ಲಾಸ್ಟ್ಗಳಿಗೆ ಬಲಿಯಾಗುತ್ತದೆ. ಇದು ಅಫ್ಜಲ್ ಗುರುವಿಗೆ ಅನ್ಯಾಯದ ನೇಣಿಗೆ ಮತ್ತು ನಮ್ಮದೇ ಅಣ್ಣಾ ವಿಶ್ವವಿದ್ಯಾನಿಲಯದ ಪ್ರೊ.ಚಿತ್ರಕಲಾ ಗೋಪಾಲನ್ ಘಟನೆಯ ನೆನಪಿಗಾಗಿ. ನಮ್ಮ ಸರ್ವಶಕ್ತನ ಹೆಸರಿನಲ್ಲಿ ನಾವು ರಕ್ಷಣಾ ಕಾರ್ಯಾಚರಣೆ ಧೈರ್ಯ ಮಾಡುತ್ತೇವೆ. ಇಂದಿನ ಪವಿತ್ರ ಕಾರ್ಯಾಚರಣೆಗೆ ಇತರ ಸ್ಥಳಿಯ ವಸ್ತುಗಳನ್ನೂ ಪಡೆಯಲಾಗಿದೆ. ಇದು ನಮ್ಮ ಕೊನೆಯ ಘಟನೆಯಾಗಿದ್ದು, ನಾವು ಸ್ವರ್ಗವನ್ನು ನೋಡಲು ಬಯಸುತ್ತೇವೆ. ಇಂದು ಈ ಆಪರೇಷನ್ ಮುಗಿದ ನಂತರ ನಮ್ಮ ಹಿಂದು ಹೆಸರುಗಳು ನಮ್ಮೊಂದಿಗೆ ಹೋಗುತ್ತವೆ ಮತ್ತು ನಾವು ಹುತಾತ್ಮರಾಗುತ್ತೇವೆ.! ಇದನ್ನು ಓದುತ್ತಿರುವ ಬಿಲಾಲ್ ಇಂದು ದಿನ ಮತ್ತು ಏನು ಮಾಡಬೇಕೆಂದು ನಿಮಗೆ ತಿಳಿದಿದೆ. ಡಿಎಂಕೆ ಅರಿವಲಯಂನ ಪಿ.ವಿ. ಕಲ್ಯಾಣಸುಂದರಂ ಅವರನ್ನು ಸಂಪರ್ಕಿಸಿ ಮತ್ತು ಪಿಂಕ್ ಲಕೋಟೆಗಾಗಿ ನಾವು ಅವರಿಗೆ ನಮ್ಮ ಕಥೆಯ ವೀಡಿಯೊ ಕಳುಹಿಸಿದ್ದೇವೆ. ಶ್ರೀಮತಿ ಕಿರುತಿಗಾ ಉದಯನಿಧಿ ಮತ್ತು ಅವರ ಬೇನಾಮಿ ಅರ್ಜುನ್ ದುರಿಯಾ ರಾಜಶಂಕರ್ ಅವರನ್ನು ಮರೆಮಾಡಲು ಡಿಎಂಕೆ ಕುಟುಂಬದೊಂದಿಗೆ ತೊಡಗಿಸಿಕೊಂಡಿದ್ದೇವೆ. ಅಲ್ಲಾ ಹು ಅಕ್ಬರ್!
ಉಡುಪಿಯ ಶಾರದಾ ರೆಸಿಡೆನ್ಶಿಯಲ್ ಸ್ಕೂಲ್ ಇ-ಮೇಲ್ಗೆ ಅನಾಮಧೇಯ ವ್ಯಕ್ತಿಯಿಂದ ಬಾಂಬ್ ಬೆದರಿಕೆ ಸಂದೇಶ ಬಂದಿದ್ದಾಗಿ ಪ್ರಿನ್ಸಿಪಾಲ್ ನೀಡಿದ ಮಾಹಿತಿಯಂತೆ ಪ್ರಕರಣ ದಾಖಲಾಗಿದೆ. ಶಾಲೆಯಲ್ಲಿ ಎಲ್ಲ ರೀತಿಯಲ್ಲೂ ತಪಾಸಣೆ ಮಾಡಲಾಗಿದ್ದು ಬಾಂಬ್ ಇಟ್ಟಿದ್ದು ಕಂಡುಬಂದಿಲ್ಲ. ತಪಾಸಣೆ ಮುಂದುವರಿದಿದ್ದು, ಇ-ಮೇಲ್ ಮಾಡಿದ ವ್ಯಕ್ತಿ ಯಾರೆಂದು ಪರಿಶೀಲಿಸಲಾಗುತ್ತಿದ್ದು, ತನಿಖೆ ಮುಂದುವರಿದಿದೆ. | ಡಾ. ಅರುಣಕುಮಾರ್ ಕೆ. ಜಿಲ್ಲಾ ಪೊಲೀಸ್ ವರಿಷ್ಠ, ಉಡುಪಿ