

ಶಿವಮೊಗ್ಗ: ನಗರದ ವಿಮಾನ ನಿಲ್ದಾಣದಲ್ಲಿ ಬಿಟಿಸಿಪಿ(ಬಾಂಬ್ ಥ್ರೆಟ್ ಕಾಂಟಿಜೆನ್ಸಿ ಪ್ಲಾೃನ್) ಪರವಾನಗಿ ಜು.18ರಂದು ಹಿಂಪಡೆದ ಕಾರಣ ಆಗಸ್ಟ್ 11ರಿಂದ ಶುರುವಾಗಬೇಕಿದ್ದ ಶಿವಮೊಗ್ಗ-ಬೆಂಗಳೂರು ನಡುವಿನ ವಿಮಾನ ಹಾರಾಟ 31ಕ್ಕೆ ಮುಂದೂಡುವಂತಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಕೇಂದ್ರದ ನಿರ್ದೇಶನದಂತೆ ಪ್ರತಿಯೊಂದು ವಿಮಾನ ನಿಲ್ದಾಣಗಳಲ್ಲೂ ಇನ್ಮುಂದೆ ಬಾಂಬ್ ಸ್ಕ್ವಾಡ್ ಹೊಂದಬೇಕಿದೆ. ಆ ನಿಟ್ಟಿನಲ್ಲಿ ಕೇಂದ್ರದ ಡಿಜಿ ಐಜಿಪಿ ಜುಲ್ಫಿಕರ್ ಹುಸೇನ್ ಮತ್ತು ಕಾರ್ಯದರ್ಶಿ ರಾಜು ಬನ್ಸಾಲ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು ಆಗಸ್ಟ್ 28ರೊಳಗೆ ಪ್ರತ್ಯೇಕ ಬಾಂಬ್ ಸ್ಕ್ವಾಡ್ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ. ಹಾಗಾಗಿ ಇಂಡಿಗೋ ಏರ್‌ಲೈನ್ಸ್ ಆ.31ರಿಂದ ಹಾರಾಟ ಶುರು ಮಾಡಲು ನಿರ್ಧರಿಸಿದೆ ಎಂದು ಹೇಳಿದರು.
ಕಲಬುರಗಿ, ಬೆಳಗಾವಿ, ಮೈಸೂರು ವಿಮಾನ ನಿಲ್ದಾಣಗಳಲ್ಲೂ ಬಾಂಬ್ ಸ್ಕ್ಯಾಡ್ ವ್ಯವಸ್ಥೆ ಇಲ್ಲ. ಈಗ ಶಿವಮೊಗ್ಗದಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲಿವರೆಗೆ ಹುಬ್ಬಳ್ಳಿಯಿಂದ ನೆರವು ಪಡೆಯುವ ಭರವಸೆ ನೀಡಲಾಗಿತ್ತು. ಆದರೂ ಪರವಾನಗಿ ಹಿಂಪಡೆದ ಕಾರಣ ವಿಮಾನ ಹಾರಾಟ 15 ದಿನ ಮುಂದಕ್ಕೆ ಹೋಗಿದೆ ಎಂದರು.
ಉಡಾನ್ ಯೋಜನೆಯಲ್ಲಿ ಸ್ಪೈಸ್‌ಜೆಟ್, ಅಲಾಯನ್ಸ್ ಮತ್ತು ಸ್ಟಾರ್ ಏರ್‌ಲೈನ್ಸ್ ವಿಮಾನಯಾನ ಸಂಸ್ಥೆಗಳು ತಿರುಪತಿ, ಗೋವಾ, ಹೈದರಾಬಾದ್ ಮಾರ್ಗದಲ್ಲಿ ಸಂಚಾರ ಮಾಡುವ ಸಂಬಂಧ ಕರೆದಿದ್ದ ಟೆಂಡರ್‌ನಲ್ಲಿ ಭಾಗವಹಿಸಿ ಯಶಸ್ವಿಯಾಗಿವೆ. 90 ದಿನಗಳಲ್ಲಿ ಶಿವಮೊಗ್ಗದಿಂದ ವಿಮಾನ ಹಾರಾಟ ಶುರು ಮಾಡಬೇಕಿದೆ. ಮೊದಲು ಮೂರು ತಿಂಗಳು ಹಗಲು ಮಾತ್ರ ಕಾರ್ಯಾಚರಣೆ ನಡೆಸಲಿದ್ದು ಆನಂತರ ರಾತ್ರಿ ಲ್ಯಾಂಡಿಂಗ್ ವ್ಯವಸ್ಥೆ ಕೂಡ ಇರಲಿದೆ. ಈ ಪಟ್ಟಿಯಲ್ಲಿ ಮುಂಬೈ ಮಾರ್ಗದ ಹೆಸರೂ ಸೇರ್ಪಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸೇರಿಸಿಲ್ಲ. ಮುಂಬೈ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು ಅಲ್ಲಿಗೂ ವಿಮಾನ ಆರಂಭಿಸುವ ಬಗ್ಗೆ ಪ್ರಯತ್ನ ಮಾಡಲಾಗುವುದು. ಆಗಸ್ಟ್ 1ರಂದು ಕೇಂದ್ರದ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯಾ ಸಿಂಧಿಯಾ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಲಾಗುವುದು ಎಂದರು.
ವಿಮಾನ ಪ್ರಯಾಣ ದರ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ವಿಮಾನ ಬೇಡಿಕೆಯಂತೆ ಸಾಫ್ಟವೇರ್‌ನಲ್ಲೇ ದರ ನಿಗದಿ ಆಗಲಿದೆ. ಸೆಪ್ಟೆಂಬರ್, ಅಕ್ಟೋಬರ್‌ವರೆಗೆ ಬುಕ್ಕಿಂಗ್ ಆಗಿದೆ. ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳನ್ನು ಕೇಂದ್ರದ ವಿಮಾನಯಾನ ಪ್ರಾಧಿಕಾರ ನಿರ್ವಹಣೆ ಮಾಡುತ್ತಿದ್ದರೆ, ಶಿವಮೊಗ್ಗದ ವಿಮಾನ ನಿಲ್ದಾಣ ನಿರ್ವಹಣೆಯನ್ನು ರಾಜ್ಯ ಸರ್ಕಾರ ವಹಿಸಿಕೊಂಡಿದೆ ಎಂದರು.