ಬಾಂಬ್ ಸ್ಫೋಟ ಪ್ರಕರಣ ಖುಲಾಸೆಗೆ ಅರ್ಜಿ!

H12 Railway Blast (1)
Published on

ಹುಬ್ಬಳ್ಳಿ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಹುಬ್ಬಳ್ಳಿ ರೈಲು ನಿಲ್ದಾಣದ ನಾಡ ಬಾಂಬ್ ಸ್ಫೋಟ ಪ್ರಕರಣ ಜರುಗಿ ಎರಡು ವರ್ಷ ಕಳೆಯುತ್ತಾ ಬಂದರೂ ಆರೋಪಿಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಪ್ರಕರಣವನ್ನು ತಾತ್ಕಾಲಿಕವಾಗಿ ಖುಲಾಸೆ ಮಾಡಲು ರೈಲ್ವೆ ಪೊಲೀಸರು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿಯ 2ನೇ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಸಿದ್ದಾರೆ.

2019ರ ಅಕ್ಟೋಬರ್ 21ರಂದು ಹುಬ್ಬಳ್ಳಿ- ವಿಜಯವಾಡ ನಡುವೆ ಸಂಚರಿಸುವ ಅಮರಾವತಿ ಎಕ್ಸ್​ಪ್ರೆಸ್ ರೈಲಿನ ಕೊನೆಯ ಬೋಗಿಯಲ್ಲಿ 8 ನಾಡ ಬಾಂಬ್​ಗಳಿದ್ದ ಬಕೆಟ್ ಪತ್ತೆಯಾಗಿತ್ತು. ಇದರಲಿದ್ದ ಒಂದು ಬಾಂಬ್ ಸ್ಪೋಟಗೊಂಡ ಪರಿಣಾಮ ಚಹಾ ಮಾರುವ ಕಾರ್ವಿುಕ ಹುಸೇನಸಾಬ ನಾಯಕವಾಲೆ ಎಂಬಾತನ ಬಲಗೈ ಛಿದ್ರಗೊಂಡಿತ್ತು. ಈ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸ್ಪೋಟಗೊಂಡ ಸ್ಥಳಕ್ಕೆ ಅಂದಿನ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಮತ್ತಿತರರು ಭೇಟಿ ನೀಡಿ ತನಿಖೆಗೆ ಆದೇಶಿಸಿದ್ದರು.

ಅಂದಿನ ರೈಲ್ವೆ ಎಸ್​ಪಿ ಬೋರಲಿಂಗಯ್ಯ ಹಾಗೂ ತನಿಖಾಧಿಕಾರಿಯಾಗಿದ್ದ ಡಿವೈಎಸ್​ಪಿ ಬಿ.ಬಿ. ಪಾಟೀಲ ನೇತೃತ್ವದ ತಂಡ ವಿಜಯವಾಡದಿಂದ ಹುಬ್ಬಳ್ಳಿವರೆಗೆ ಎಲ್ಲ 26 ರೈಲು ನಿಲ್ದಾಣಗಳ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ದರು. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣಕ್ಕೆ ಎರಡೆರೆಡು ಬಾರಿ ತೆರಳಿ ತನಿಖೆ ನಡೆಸಿದ್ದರು. ಆದರೂ ಸ್ಪೋಟದ ಕುರಿತ ಯಾವ ಸುಳಿವೂ ಸಿಗಲಿಲ್ಲ. ಯಾವುದೇ ಸಾಕ್ಷಿ, ಪುರಾವೆ, ಆರೋಪಿಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ರೈಲ್ವೆ ಎಸ್​ಪಿ ಸಿರಿಗೌರಿ ಡಿ.ಆರ್. ಮಾರ್ಗದರ್ಶನದಲ್ಲಿ ಡಿವೈಎಸ್​ಪಿ ಪುಷ್ಪಲತಾ 2ನೇ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಸಿದ್ದಾರೆ.

ಆರ್​ಎಸ್​ಎಸ್, ಶಿವಸೇನೆ ಹೆಸರಿತ್ತು!

ವಿಜಯವಾಡದಿಂದ ಹುಬ್ಬಳ್ಳಿಗೆ ಬಂದಿದ್ದ ಅಮರಾವತಿ ಎಕ್ಸ್​ಪ್ರೆಸ್ ರೈಲು ನಾಲ್ಕನೇ ಪ್ಲಾಟ್​ಫಾಮರ್್​ನಲ್ಲಿ ನಿಂತಿತ್ತು. ಎಲ್ಲ ಪ್ರಯಾಣಿಕರು ಇಳಿದ ಬಳಿಕ ಸ್ವಚ್ಛತಾ ಕಾರ್ವಿುಕನೊಬ್ಬನಿಗೆ 8 ಲಿಂಬೆ ಹಣ್ಣಿನ ಗಾತ್ರದ ಕಚ್ಚಾ ಬಾಂಬ್​ಗಳಿದ್ದ ಬಕೆಟ್ ಸಿಕ್ಕಿತ್ತು. ಅದರ ಮೇಲೆ ‘ಪ್ರಕಾಶ ಅಭಿತ್ಕರ್, ಕೊಲ್ಲಾಪುರ ಎಂಎಲ್​ಎ, ಗುರಗೋಟಿ, ‘ನೋ ಬಿಜೆಪಿ ನೋ ಆರ್​ಎಸ್​ಎಸ್. ಓನ್ಲಿ ಶಿವಸೇನಾ’ ಎಂದು ಬರೆಯಲಾಗಿತ್ತು. ಸಂಶಯಾಸ್ಪದ ಬಕೆಟ್ ಕಂಡ ಕೂಡಲೇ ಕಾರ್ವಿುಕ ಸ್ಥಳದಲ್ಲಿದ್ದ ಆರ್​ಪಿಎಫ್ ಪೇದೆ ರವಿ ರಾಠೋಡಗೆ ಮಾಹಿತಿ ನೀಡಿದ್ದರು. ಆ ಬಕೆಟ್ ತೆಗೆದುಕೊಂಡು ಬಂದ ರವಿ ಸ್ಟೇಶನ್ ಮಾಸ್ಟರ್​ಗೆ ವಿಷಯ ತಿಳಿಸಿದ್ದರು. ಬಳಿಕ ಕುತೂಹಲ ತಡೆಯಲಾರದೇ ಚಹಾ ಮಾರುವ ಹುಸೇನಸಾಬನನ್ನು ಕರೆದು, ಅದನ್ನು ಒಡೆದು ಪರೀಕ್ಷಿಸುವಂತೆ ಸೂಚಿಸಿದ್ದ. ಆತ ಕೈಯಲ್ಲಿ ಹಿಡಿದು ನೆಲಕ್ಕೆ ಒಡೆದ ಕೂಡಲೇ ಬಾಂಬ್ ಸ್ಪೋಟಗೊಂಡು ಆತನ ಕೈ ಛಿದ್ರಗೊಂಡಿತ್ತು. ಸ್ಟೇಶನ್ ಮಾಸ್ಟರ್ ಕಚೇರಿಯ ಗಾಜು ಪುಡಿ ಪುಡಿಯಾಗಿತ್ತು.

ಆರ್​ಪಿಎಫ್ ಪೇದೆ ರಾಠೋಡನ ನಿರ್ಲಕ್ಷ್ಯಂದ ಅವಘಡ ಸಂಭವಿಸಿತ್ತು. ಮೇಲಧಿಕಾರಿಗಳಿಗೆ ವಿಷಯ ತಿಳಿಸಿ ಅವರಿಗೆ ಒಪ್ಪಿಸಿದ್ದರೆ ಇಷ್ಟೆಲ್ಲ ಆಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಆರ್​ಪಿಎಫ್​ನ ರವಿ ರಾಠೋಡ ಹಾಗೂ ಕೆಲ ಅಧಿಕಾರಿಗಳನ್ನು ಆರ್​ಪಿಎಫ್ ಅಮಾನತುಗೊಳಿಸಿ ಕೈತೊಳೆದುಕೊಂಡಿತ್ತು.

ಗೊಂದಲದ ಗೂಡಾದ ಪ್ರಕರಣ

ಒಟ್ಟಾರೆ ಈ ಪ್ರಕರಣ ಆರಂಭದಿಂದ ಈವರೆಗೆ ಗೊಂದಲದ ಗೂಡಾಗಿತ್ತು. ಸ್ಪೋಟಗೊಂಡ ಬಳಿಕ ಯಾರು ಪ್ರಕರಣ ದಾಖಲಿಸಿಕೊಳ್ಳಬೇಕು ಎಂಬ ಕುರಿತು ರೈಲ್ವೆ ಇಲಾಖೆ, ರೈಲ್ವೆ ಪೊಲೀಸ್, ಆರ್​ಪಿಎಫ್​ಗೆ ಸ್ಪಷ್ಟತೆ ಇರಲಿಲ್ಲ. ಇದಕ್ಕಾಗಿ ಕಾಲಹರಣ ಮಾಡಿದ್ದರು. ಮರುದಿನ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಕೆಟ್​ನಲ್ಲಿದ್ದ 7 ಬಾಂಬ್​ಗಳನ್ನು ನಿಲ್ದಾಣದ ಪಕ್ಕದ ಖುಲ್ಲಾ ಜಾಗದಲ್ಲಿ ಗುಂಡಿ ತೋಡಿ ಮರಳಿನ ಚೀಲಗಳ ನಡುವೆ ಮುಚ್ಚಿಟ್ಟಿದ್ದರು. ಐದು ದಿನಗಳ ಬಳಿಕ ಬೆಂಗಳೂರಿನಿಂದ ಬಂದ ಬಾಂಬ್ ನಿಷ್ಕ್ರಿಯ ದಳ ನಿರ್ಜನ ಪ್ರದೇಶದಲ್ಲಿ ಸ್ಪೋಟಕಗಳನ್ನು ನಿಷ್ಕ್ರಿಯಗೊಳಿಸಿತ್ತು.

ಮಹಾರಾಷ್ಟ್ರ ಘಟನೆಗೆ ಸಾಮ್ಯತೆ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಈ ಸ್ಫೋಟ ನಡೆದಿತ್ತು. ಕೊಲ್ಲಾಪುರ ಶಾಸಕ ಪ್ರಕಾಶ ಅಭಿತ್ಕರ ಹೆಸರು ಬಕೆಟ್ ಮೇಲೆ ಬರೆಯಲಾಗಿತ್ತು. ಸ್ಪೋಟಕ್ಕೂ ಎರಡು ದಿನ ಮುಂಚೆ ಕೊಲ್ಲಾಪುರ ರೈಲು ನಿಲ್ದಾಣದ ಸಮೀಪವೇ ಇದೇ ರೀತಿಯ ಕಚ್ಚಾ ಬಾಂಬ್ ಸ್ಪೋಟಗೊಂಡು ಒಬ್ಬ ಸಾವನ್ನಪ್ಪಿದ್ದ. ಈ ಪ್ರಕರಣದಲ್ಲೂ ಆರೋಪಿಗಳು ಪತ್ತೆಯಾಗದ ಕಾರಣ ಅಲ್ಲಿನ ಪೊಲೀಸರು ‘ಸಿ ರಿಪೋರ್ಟ್’ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಎಚ್ಚರಿಸಿದ್ದ ವಿಜಯವಾಣಿ, ದಿಗ್ವಿಜಯ

ರೈಲು ನಿಲ್ದಾಣದಲ್ಲಿ ಬಾಂಬ್ ಸ್ಪೋಟಗೊಂಡ ಬಳಿಕವೂ ಆರ್​ಪಿಎಫ್ ಹಾಗೂ ರೈಲ್ವೆ ಪೊಲೀಸರು ಹೆಚ್ಚಿನ ಭದ್ರತೆ ವಹಿಸಿರಲಿಲ್ಲ. ಈ ಕುರಿತು ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ಸುದ್ದಿವಾಹಿನಿ ರಿಯಾಲಿಟಿ ಚೆಕ್ ಮೂಲಕ ಎಚ್ಚರಗೊಳಿಸಿತ್ತು. ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಅನುಮಾನಾಸ್ಪದ ಬ್ಯಾಗ್ ಇಟ್ಟು ಹೋದರೂ ಯಾರೂ ಕೇಳುವವರೇ ಇರಲಿಲ್ಲ. ಲೋಹ ಶೋಧಕ ಯಂತ್ರ ಇರಲಿಲ್ಲ. ಈ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಇದಾದ ಮರುದಿನವೇ ಆರ್​ಪಿಎಫ್ ಪೇದೆಗಳು ಲಾಠಿ ಹಿಡಿದು ಭದ್ರತೆಗೆ ನಿಂತಿದ್ದರು. ಲೋಹ ಶೋಧಕ ಯಂತ್ರ ದುರಸ್ತಿಪಡಿಸಿದ್ದರು. ಇತ್ತೀಚೆಗೆ ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ.

ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗಿದೆ. ಆದರೆ, ಸದ್ಯದ ಮಟ್ಟಿಗೆ ಆರೋಪಿಗಳು ಪತ್ತೆಯಾಗಿಲ್ಲ. ಹಾಗಾಗಿ, ಪ್ರಕರಣವನ್ನುತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಸಲಾಗಿದೆ. ಮುಂದೆ ಆರೋಪಿಗಳು ಸಿಕ್ಕರೆ ಪ್ರಕರಣವನ್ನು ಪತ್ತೆ ಮುಂದುವರಿಸಲಾಗುವುದು.| ಪುಷ್ಪಲತಾ, ಡಿವೈಎಸ್​ಪಿ, ರೈಲ್ವೆ ಪೊಲೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net