

ಪಡುಬಿದ್ರಿ: ನಂದಿಕೂರು-ಮುದರಂಗಡಿ ರಾಜ್ಯ ಹೆದ್ದಾರಿ ಬಳಿಯಿರುವ ಬೊಲ್ಯೊಟ್ಟು ಆಲಡೆ-ಬೆಳ್ಳಿಬೆಟ್ಟು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಆಯನೋತ್ಸವ ಅಂಗವಾಗಿ, ದೇವಳದ ತಂತ್ರಿ ಹರೀಶ ಜೋಯಿಸ ಹಾಗೂ ಪ್ರಧಾನ ಅರ್ಚಕ ಗಣೇಶ್ ಭಟ್ ನೇತೃತ್ವದಲ್ಲಿ ಮಂಗಳವಾರ ಸಾಮೂಹಿಕ ಪ್ರಾರ್ಥನೆ, ಕಲಶಾಭಿಷೇಕ, ಮಹಾಗಣಪತಿ ಹೋಮ, ಧ್ವಜಾರೋಹಣ, ಮಹಾಪೂಜೆ ನೆರವೇರಿತು.
ಸಹಸ್ರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ಸಲ್ಲಿಸಿದರು. ಭಕ್ತರಿಂದ ಮುಷ್ಟಿಕಾಣಿಕೆ ಸಮರ್ಪಣೆಯೂ ನಡೆಯಿತು. ಸಂಜೆ ಹಾಲಿಟ್ಟು ಸೇವೆ ಹಾಗೂ ಢಕ್ಕೆ ಬಲಿ, ಪೀಠಪೂಜೆ, ಬೈಗಿನ ಬಲಿ, ನೃತ್ಯಸೇವೆ, ಬಳಿಕ ಕುಮಾರ ದರ್ಶನ, ಸಿರಿಗಳ ಜಾತ್ರೆ, ರಂಗಪೂಜೆ, ಶ್ರೀ ಭೂತ ಬಲಿ, ಆಯನೋತ್ಸವ ಸಂಪನ್ನಗೊಂಡಿತು.
ಆಡಳಿತ ಮೊಕ್ತೇಸರ ಯುವರಾಜ ಶೆಟ್ಟಿ ಎಲ್ಲೂರು ಗುತ್ತು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸುಂದರ ಶೆಟ್ಟಿ ಬೆಳ್ಳಿಬೆಟ್ಟುಗುತ್ತು ಬೆಳಪು, ಉದಯ ಶೆಟ್ಟಿ ಅವರಾಲು ದಾರೋಡ್ ಗುತ್ತು, ಸೀತಾರಾಮ ಶೆಟ್ಟಿ ಅವರಾಲು ಬೋಳಿಂಜೆ ಗುತ್ತು ಹಾಗೂ ಸಮಿತಿ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.