

ಮೈಸೂರು: ಧೂಮ್ ಮಚಾಲೇ ಧೂಮ್ ಮಚಾಲೇ ಧೂಮ್ ಎನ್ನುವ ಹಾಡು ಹೇಳುವ ಮೂಲಕ ಯುವ ದಸರಾದಲ್ಲಿ ಧೂಳೆಬ್ಬಿಸುವಂತೆ ಮಾಡಿದ ಬಾಲಿವುಡ್ ಗಾಯಕಿ ಸುನಿಧಿ ಚೌಹಾಣ್ ಯುವ ಸಮೂಹ ಕುಣಿಯುವಂತೆ ಮಾಡಿದರು. ಈ ಮೂಲಕ ಐದು ದಿನಗಳ ಕಾಲ ಉತ್ತನಹಳ್ಳಿಯ ಬಯಲಿನಲ್ಲಿ ಆಯೋಜಿಸಿದ್ದ ಯುವ ದಸರಾಕ್ಕೆ ಶನಿವಾರ ಸಂಭ್ರಮದ ತೆರೆ ಬಿತ್ತು.
ಹಾಡುವುದರ ಜೊತೆ ಭರ್ಜರಿ ಸ್ಟೆಪ್ ಹಾಕುವ ಮೂಲಕ ಇಡೀ ಯುವ ಸಮೂಹಕ್ಕೆ ಕಿಚ್ಚು ಹಚ್ಚಿದ ಸುನಿಧಿ ಚೌಹಾಣ್, ಗಾಯನ ಪ್ರಿಯರಿಗೆ ಕಿಕ್ಕೇರಿಸಿ ಕುಣಿದು ಕುಪ್ಪಳಿಸುವಂತೆ ಮಾಡಿದರು.
ವೇದಿಕೆಗೆ ಆಗಮಿಸುತ್ತಲೇ ಧೂಮ್ ಚಿತ್ರದ ಹಾಡು ಹಾಡುತ್ತಲೇ ಪ್ರೇಕ್ಷಕರಿಗೆ ಜೋಶ್ ತುಂಬಿದರು. ತುಂತುರು ಮಳೆಯನ್ನೂ ಲೆಕ್ಕಿಸದ ಯುವಕ ಯುವತಿಯರು ಹುಚ್ಚೆದ್ದು ಕುಣಿದು ಯುವಕ ಯುವತಿಯರು ಸಂಭ್ರಮಿಸಿದರು.
ಕನ್ನಡ ಹಾಡಿಗೆ ನೆರೆದಿದ್ದವರು ಫಿದಾ:
ಮುಂಗಾರು ಮಳೆ ಚಿತ್ರದ ಕುಣಿದು ಕುಣಿದು ಬಾರೇ ಹಾಗೂ ಜೋಗಿ ಚಿತ್ರದ ಚಿಕು ಬುಕ್ ರೈಲು ನಿಲ್ಲೋದಿಲ್ಲ ಎಲ್ಲೂ ಹಾಡುವ ಮೂಲಕ ಜೋರು ಚಪ್ಪಾಳೆ, ಸಿಳ್ಳೆ ಗಿಟ್ಟಿಸಿದರು. ಅಲ್ಲದೇ ರಾ ರಾ ರಾಕಮ್ಮ ಹಾಡು ಹಾಡುತ್ತಲೇ ಇಡೀ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ಕೂಡ ಧ್ವನಿಗೂಡಿಸಿ ಶಿಳ್ಳೆ ಕೇಕೆ ಹಾಕಿ ಕುಣಿದು ಕುಪ್ಪಳಿಸಿದರು.
ಅಲ್ಲದೇ ಬಾಲಿವುಡ್ ಸಿನಿಮಾಗಳ ಮೇನ್ ಇಸ್ಕು ಮೇರೆ, ಐಸಾ ಮೇರಿ ಪ್ಯಾರ್ ಹೈ, ಹ್ಯಾನೀ ಹ್ಯಾನಿ ಚುಟ್ಕೆಯ, ಮೈ ಕ್ರೇಜಿ ಗರ್ಲ್ ಮೈ ಕ್ರೇಜಿ ಗರ್ಲ್, ಫನಾ ಚಿತ್ರದ ಮೇರೆ ಹಾತ್ ಮೇ , ತೇರಿ ಮೇರಿ ಇಸ್ಕು ಸೇ, ಮೇರಿ ಕಮಲಿ ಕಮಲಿ, ಪುಷ್ಪ ಚಿತ್ರದ ಸಾಮಿ ಸಾಮಿ ಹಾಡುಗಳನ್ನು ಹಾಡಿ ಯುವ ದಸರಾ ಅದ್ದೂರಿ ಸಂಭ್ರಮಕ್ಕೆ ಸಾಕ್ಷಿಯಾದರು.
ಕಿಕ್ಕಿರಿದು ತುಂಬಿದ ಮೈದಾನ
ಯುವ ದಸರೆಯ ಅಂತಿಮ ದಿನ ಇಡೀ ಮೈದಾನ ಕಿಕ್ಕಿರಿದು ತುಂಬಿತ್ತು. ಸುನಿಧಿ ಚೌಹಾಣ್ ಗಾಯನಕ್ಕೆ ಎಲ್ಲರೂ ಕುಣಿದು ಶಿಳ್ಳೆ ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿದರು. ಕಾರ್ಯಕ್ರಮ ಪೂರ್ಣವಾಗುವ ವರೆವಿಗೂ ನೋಡುಗರು ಕದಲದೆ ಕುಳಿತಿದ್ದರು.