

ಮಂಗಳೂರು: ತುಳು ರಂಗಭೂಮಿಯಲ್ಲೇ ಹೊಸ ಇತಿಹಾಸ ಸೃಷ್ಟಿಸಲಿರುವ ‘ಬೊಳ್ಳಿಮಲೆತ ಶಿವಶಕ್ತಿಲು’ ತುಳು ಪೌರಾಣಿಕ ನಾಟಕದ ಪ್ರಾಯೋಗಿಕ ಪ್ರದರ್ಶನ ಆ.27ರಂದು ಸಂಜೆ 5ಗಂಟೆಗೆ ನಗರದ ಪುರಭವನದಲ್ಲಿ ನಡೆಯಲಿದೆ.
ಅದ್ದೂರಿ ರಂಗವೇದಿಕೆ, ನವೀನ ಬೆಳಕಿನ ವಿನ್ಯಾಸದೊಂದಿಗೆ ಪ್ರಬುದ್ಧ ಕಲಾವಿದರ ಕೂಡುವಿಕೆಯಲ್ಲಿ ಈ ನಾಟಕ ಮೂಡಿಬರಲಿದ್ದು, ರಂಗಭೂಮಿ ಕಲಾವಿದರು, ಕಲಾಭಿಮಾನಿಗಳಲ್ಲಿ ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಕದ್ರಿ ನವನೀತ ಶೆಟ್ಟಿ ಕದ್ರಿ ನಾಟಕ ರಚಿಸಿದ್ದು, ಶಿರಿಡಿ ಸಾಯಿ ಮಂದಿರದ ಮುಖ್ಯಸ್ಥರಾದ ವಿಶ್ವಾಸ್‌ದಾಸ್ ನಿರ್ಮಾಣ, ಬಿ.ಎಸ್. ಕಾರಂತ್ ಸಂಗೀತ, ಲಲಿತ ಕಲಾ ಆರ್ಟ್ಸ್ ವೇಷಭೂಷಣ, ಪಟ್ಲ ಸತೀಶ್ ಶೆಟ್ಟಿ, ಲಾವಣ್ಯ ಸುಧಾಕರ್ ಹಿನ್ನಲೆ ಗಾಯನ, ದಿವ್ಯಜ್ಯೋತಿ ಸೌಂಡ್ಸ್ ಧ್ವನಿ, ತಸ್ಮಯ್ ಕೊಡಿಯಾಲ್‌ಬೈಲ್ ಬೆಳಕು ನಿರ್ವಹಣೆ, ದನಿಶ್ ಕುಮಾರ್‌ದಾಸ್ ತಾಂತ್ರಿಕ ನಿರ್ವಹಣೆ ಮಾಡಲಿದ್ದಾರೆ ಎಂದು ನಾಟಕದ ನಿರ್ದೇಶಕರಾದ ಲಾವಣ್ಯ ವಿಶ್ವಾಸ್‌ದಾಸ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಧಕರಿಗೆ ಸನ್ಮಾನ: ಕಲಾ ಕ್ಷೇತ್ರದ ಸಾಧಕರಾದ ಪಟ್ಲ ಸತೀಶ್ ಶೆಟ್ಟಿ, ಭೋಜರಾಜ್ ವಾಮಂಜೂರು, ಬಿ.ಎಸ್. ಕಾರಂತ್ ಇಂಚರ, ಡಾ.ಪ್ರಿಯಾ ಹರೀಶ್, ಅಶೋಕ್ ಕ್ರಾಸ್ತಾರಿಗೆ ಸನ್ಮಾನ ನೆರವೇರಲಿದೆ ಎಂದು ಲಾವಣ್ಯದಾಸ್ ತಿಳಿಸಿದರು.
ನಾಟಕ ರಚನೆಕಾರ ಕದ್ರಿ ನವನೀತ ಶೆಟ್ಟಿ ಮಾತನಾಡಿ, ಭಗವತಿಯ ಆರಾಧನೆಯನ್ನೊಳಗೊಂಡ ಬೊಳ್ಳಿಮಲೆತ ಶಿವಶಕ್ತಿಲು ನಾಟಕದ ಆರಂಭೋತ್ಸವ ಪ್ರಾಯೋಗಿಕ ಪ್ರದರ್ಶನ ಮೂಲಕ ಆಗಲಿದೆ. ಕೇರಳದ ತ್ರಿಶೂರಿನ ಕಲಾವಿದರು ರಂಗವೇದಿಕೆ ಸಿದ್ಧಗೊಳಿಸಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಿಭಿನ್ನ ರೀತಿಯಲ್ಲಿ ಈ ಪೌರಣಿಕ ನಾಟಕ ನಿರ್ಮಾಣವಾಗುತ್ತಿದೆ ಎಂದರು.
ಸಾಯಿಶಕ್ತಿ ಕಲಾ ಬಳಗದ ಕಾರ್ಯದರ್ಶಿ ಗೌರವ್ ಶೆಟ್ಟಿಗಾರ್, ಸಾಯಿಶಕ್ತಿ ಬಳಗದ ಗೌರವಾಧ್ಯಕ್ಷ ಪ್ರತಾಪ್‌ಚಂದ್ರ ಶೆಟ್ಟಿ, ಅಧ್ಯಕ್ಷರಾದ ಶೈಲೇಶ್ ಮಲ್ಯ ಮಠದಕಣಿ ಉಪಸ್ಥಿತರಿದ್ದರು.