

ಪಾಂಡವಪುರ : ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ವೀರ ಮರಣವನ್ನಪ್ಪಿದ ಅಪ್ರತಿಮ ಸೇನಾನಿಗಳಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಹುತಾತ್ಮ ದಿನದ ಅಂಗವಾಗಿ ತಾಲೂಕಿನ ಮಹದೇಶ್ವರಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಇತ್ತೀಚೆಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಮೈಸೂರಿನ ಕೆ.ಆರ್.ಆಸ್ಪತ್ರೆ ರಕ್ತ ನಿಧಿ ಕೇಂದ್ರ, ಮಂಡ್ಯದ ಜೀವಧಾರೆ ಟ್ರಸ್ಟ್, ಮೇಲುಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್‌ಎಸ್‌ಎಸ್ ಘಟಕಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶಿಬಿರದಲ್ಲಿ 40 ಕ್ಕೂ ಹೆಚ್ಚು ದಾನಿಗಳು ರಕ್ತದಾನ ಮಾಡಿದರು. ಇದೇ ವೇಳೆ ಎನ್‌ಎಸ್‌ಎಸ್ ಘಟಕದ ಶಿಬಿರಾರ್ಥಿಗಳು ರಕ್ತದಾನ ಮಹತ್ವದ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಿದರು.
ಜೀವಧಾರೆ ಟ್ರಸ್ಟ್ ಮುಖ್ಯಸ್ಥ ನಟರಾಜು ಮಾತನಾಡಿ, ದೇಶದಲ್ಲಿ ರಕ್ತದ ಕೊರತೆ ನೀಗಿಸಲು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕು. ಗ್ರಾಮೀಣ ಜನರಲ್ಲಿ ಅರಿವು ಮೂಡಿಸಬೇಕು. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ದೇಶಭಕ್ತರ ಸ್ಮರಣೆಗಾಗಿ ಸಮಾಜ ಸೇವಾ ಕಾರ್ಯಗಳನ್ನು ಸಂಘಟಿಸಬೇಕು ಎಂದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ನಂಜುಂಡಯ್ಯ, ರಕ್ತ ಕೇಂದ್ರದ ಮುಖ್ಯ ನಿರ್ವಾಹಕಿ ಡಾ.ಕುಸುಮಾ, ಎನ್‌ಎಸ್‌ಎಸ್ ಘಟಕದ ಅಧಿಕಾರಿ ಎಂ.ಎಸ್.ಕೃಷ್ಣ, ಸಿ.ಪರಮೇಶ್ವರ್, ನಂಜುಂಡ ಇತರರು ಇದ್ದರು.