ಬೋಳಿಯಾರ್ ಪ್ರಕರಣ ಅಂತಃಕಲಹದ ಕೃತ್ಯ : ದ.ಕ. ಜಿಲ್ಲಾ ಕಾಂಗ್ರೆಸ್ ವಕ್ತಾರ ಅಭಿಷೇಕ್ ಉಳ್ಳಾಲ್ ಆರೋಪ

Published on

ಉಳ್ಳಾಲ: ಬೋಳಿಯಾರ್ ಪ್ರಕರಣ ಶಾಸಕರನ್ನು ಸೋಲಿಸಲು ಜಂಟಿಯಾಗಿ ಪ್ರಯತ್ನಿಸಿದ ಎರಡು ಪಕ್ಷದವರ ನಡುವಿನ ಘಟನೆಯಾದರೂ ಕಾನೂನು ಪರ ಇರುವ ಶಾಸಕರ ಮೇಲೆ ಗೂಬೆ ಕೂರಿಸುವ ಕೆಲಸ ಬಿಜೆಪಿ ಮುಖಂಡರು ಹಾಗೂ ಶಾಸಕರಿಂದ ನಡೆಯುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಅಭಿಷೇಕ್ ಉಳ್ಳಾಲ್ ಆರೋಪಿಸಿದ್ದಾರೆ.

ವಿಧಾನಸಭೆ ಚುನಾವಣಾ ಸಂದರ್ಭ ಶಾಸಕರನ್ನು ಸೋಲಿಸಲು ಜಂಟಿಯಾಗಿ ಹೋರಾಟ ನಡೆಸಿದವರೇ ತಮ್ಮೊಳಗೆ ಹೋರಾಟ ನಡೆಸುತ್ತಿದ್ದು, ಶಾಸಕರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ. ‘ಭಾರತ್ ಮಾತಾ ಕೀ ಜೈ’ ಘೋಷಣೆಯನ್ನು ಪ್ರಚೋದನಕಾರಿ ಎಂದು ಕಾಂಗ್ರೆಸ್ ಯಾವತ್ತೂ ಹೇಳುವುದಿಲ್ಲ. ಆದರೆ ನಡೆದಿರುವ ನೈಜ ವಿಚಾರ ಜನತೆಗೆ ಮುಟ್ಟಿಸುವ ಕಾರ್ಯ ಆಗಬೇಕಿದೆ. ಶಾಸಕರು ಕಾನೂನು ವ್ಯಾಪ್ತಿಯ ಕೆಲಸ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ರ‌್ಯಾಲಿ ನಡೆಸಿದವರು ಅನುಮತಿ ಪಡೆಯದೆ ವಿಜಯೋತ್ಸವ ಆಚರಿಸಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷದ ವಿಜಯೋತ್ಸವ ವೇಳೆ ಕಾರ್ಯಕರ್ತರು ಯಾವ ರೀತಿ ನಡೆದುಕೊಳ್ಳಬೇಕೆಂದು ನಾಯಕರು ತಿಳಿಸಬೇಕು. ಕಾನೂನಿಗೆ ವಿರುದ್ಧವಾಗಿ ಇರುವವರು ಮಾತ್ರ ಯು.ಟಿ.ಖಾದರ್ ಅವರಿಗೆ ವೈರಿ. ಬೋಳಿಯಾರ್ ಪ್ರಕರಣದಲ್ಲಿ ಸಿಸಿಟಿವಿ ಫೂಟೇಜ್ ಆಧಾರದಲ್ಲಿ ತನಿಖೆ ನಡೆಯುತ್ತಿದ್ದು, ಸತ್ಯಾಂಶವನ್ನು ಜನತೆ ಮುಂದೆ ಪೊಲೀಸ್ ಇಲಾಖೆ ತಂದಿದೆ. ಬಿಜೆಪಿ ನಾಯಕರ ಸಲಹೆಯ ಅಗತ್ಯವಿಲ್ಲ. ಭಾರತದವನನ್ನು ಪಾಕಿಸ್ತಾನದವ ಅಂದರೆ ಯಾರೂ ಸುಮ್ಮನೆ ಕೂರುವುದಿಲ್ಲ. ಇಡೀ ಘಟನೆಯನ್ನು ಶಾಸಕರ ತಲೆಗೆ ಕಟ್ಟುವುದು ಹಾಸ್ಯಾಸ್ಪದ ಎಂದರು.

ಮುಖಂಡರಾದ ಸಿ.ಎಂ.ರವೂಫ್ ಮತ್ತು ಫಿರೋಝ್ ಮಲಾರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net