ಜುಲೈ 20ರಂದು ಮಂಗಳೂರು ಪುರಭವನದಲ್ಲಿ ಬೋಲಾವ ವಿಠಲ; ಪಂಚಮ್ ನಿಶಾದ್-ಸಂಗೀತ ಭಾರತಿ ಪ್ರತಿಷ್ಠಾನ ಪ್ರಸ್ತುತಿ

Screenshot_20250718_233005_WhatsApp
Published on

ಮಂಗಳೂರು: ಸಂಗೀತ ಭಾರತಿ ಪ್ರತಿಷ್ಠಾನ ಮುಂಬಯಿಯ ಪಂಚಮ ನಿಶಾದ್‌ನ ಸಹಯೋಗದೊಂದಿಗೆ ‘ಬೋಲಾವ ವಿಠಲ’ ಎಂಬ ಸಂಗೀತ ಕಾರ‌್ಯಕ್ರಮ ಜುಲೈ 20ರಂದು ಸಂಜೆ 5ರಿಂದ ಮಂಗಳೂರಿನ ಪುರಭವನದಲ್ಲಿ ಆಯೋಜಿಸಿದೆ.

ಹಿರಿಯ ಸಂಗೀತ ಕಲಾವಿದ ಸಂಜಯ್ ಅಭ್ಯಂಕರ್ ಹಾಗೂ ಶರಯೂ ದಾತೆ ಅವರಿಂದ ಅಭಂಗ ರೂಪದಲ್ಲಿ ಹಾಡುಗಾರಿಕೆ ನಡೆಯಲಿದೆ. ತಬ್ಲಾದಲ್ಲಿ ಪ್ರಸಾದ್ ಪಾದ್ಯೆ, ಪಕ್‌ವಾಜ್‌ನಲ್ಲಿ ಸುಖದ್ ಮುಂಡೆ, ರಿದಂನಲ್ಲಿ ಸೂರ್ಯಕಾಂತ್ ಸುರ್ವೆ, ಹಾರ್ಮೋನಿಯಂನಲ್ಲಿ ಅಭಿಷೇಕ್ ಶಿಂಕರ್, ಕೊಳಲಿನಲ್ಲಿ ಶಡಜ್ ಗೋಡ್ಕಿಂಡಿ ಸಾಥ್ ನೀಡಲಿದ್ದಾರೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ತಿಳಿಸಿದ್ದಾರೆ.

ದೇಶ ವಿದೇಶದ ನಾನಾ ವೇದಿಕೆಗಳಲ್ಲಿ ಸಂಗೀತ ಪ್ರಸ್ತುತಪಡಿಸಿರುವ ಈ ಶ್ರೇಷ್ಠ ಕಲಾವಿದರ ಅಭಂಗ್ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇದ್ದು, ಮಂಗಳೂರಿನ ಕೋಡಿಯಾಲ್‌ಬೈಲ್‌ನಲ್ಲಿರುವ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನಿಂದ ಪಾಸ್ ಪಡೆದುಕೊಳ್ಳಬಹುದಾಗಿದೆ.

ದೇಶದ ಹಲವು ಶ್ರೇಷ್ಠ ಸಂಗೀತ ಕಾರ‌್ಯಕ್ರಮಗಳನ್ನು ಆಯೋಜಿಸಿರುವ ಮುಂಬಯಿಯ ಪಂಚಮ್ ನಿಶಾದ್ ಸಂಸ್ಥೆಯ ಅಭೂತಪೂರ್ವ ಪರಿಕಲ್ಪನೆಯ ಕಾರ‌್ಯಕ್ರಮವಾಗಿರುವ ‘ಬೋಲಾವ ವಿಠಲ’ ವಿನೂತನ ಸಂತವಾಣಿ ಕಾರ‌್ಯಕ್ರಮವಾಗಿದೆ. ಈಗಾಗಲೇ ಬೆಂಗಳೂರು, ಮುಂಬೈ, ಹೈದರಾಬಾದ್ ಸೇರಿದಂತೆ ದೇಶದ ವಿವಿಧ ವಿಭಾಗದಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನಡೆದಿದೆ. ಮಂಗಳೂರಿನ ಕಾರ್ಯಕ್ರಮದ ಆರಂಭದಲ್ಲಿ ಸಂಜಯ್ ಅಭ್ಯಂಕರ್ ಹಾಗೂ ಶರಯೂ ದಾತೆ ಅವರ ಜುಗುಲ್‌ಬಂದಿ ನಡೆದರೆ, ಬಳಿಕ ಸಂಜಯ್ ಅಭ್ಯಂಕರ್ ಹಾಗೂ ಶರಯೂ ದಾತೆ ಪ್ರತ್ಯೇಕವಾಗಿ ಹಾಡುಗಾರಿಕೆ ಮಾಡಲಿದ್ದಾರೆ ಎಂದು ತಿಳಿಸಿದರು.

ಮೇವಾತಿ ಘರಾನಾದ ಮಾಂತ್ರಿಕ ಸಂಜೀವ್ ಅಭ್ಯಂಕರ್, ಹಿಂದೂಸ್ತಾನಿ ಶಾಸ್ತ್ರೀಯ ಮತ್ತು ಭಕ್ತಿ ಸಂಗೀತ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮೆಚ್ಚುಗೆ ಪಡೆದ ಕಲಾವಿದರಾಗಿದ್ದಾರೆ. ಗಾಡ್‌ಮದರ್ ಚಲನಚಿತ್ರಕ್ಕಾಗಿ ಪ್ರಶಸ್ತಿ ಪಡೆದಿರುವ ಸಂಜಯ್ ಮರಾಠಿ, ಹಿಂದಿ ಮತ್ತು ಸಂಸ್ಕೃತ ಭಜನೆಗಳ ಮೂಲಕ ಹೆಸರುವಾಸಿಯಾಗಿದ್ದಾರೆ.

ಸರಿಗಮಪ ಲಿಟಲ್ ಚಾಂಪ್ಸ್ ಕಾರ್ಯಕ್ರಮದ ಮೂಲಕ ಬಾಲ್ಯದಲ್ಲೇ ವಿಶ್ವಖ್ಯಾತಿ ಪಡೆದಿರುವ ಶರಯೂ ದಾತೆ, ಸಾಮಾಜಿಕ ಜಾಲತಾಣದಲ್ಲಿ ಹಾಡುಗಾರಿಕೆಯ ಮೂಲಕ ತನ್ನದೇ ಛಾಪು ಮೂಡಿಸಿದ ಯುವ ಕಲಾವಿದೆ. ತಾಯಿ ಅಂಜಲಿ ದಾತೆ ಅವರಿಂದ ಸಂಗೀತದ ಆರಂಭಿಕ ಶಿಕ್ಷಣ ಪಡೆದು, ಖ್ಯಾತ ಗಾಯಕಿ ಆರತಿ ಅಂಕಲಿಕರ್ ಟಿಕೇಕರ್ ಅವರಿಂದ ಹೆಚ್ಚಿನ ಅಭ್ಯಾಸ ಮಾಡಿದರು. ಅಭಂಗ್ಸ್, ನಾಟ್ಯ ಸಂಗೀತ ಸೇರಿದಂತೆ ಅರೆ ಶಾಸ್ತ್ರೀಯ ಸಂಗೀತ ಪ್ರಕಾರಗಳನ್ನು ಹಾಡುವಲ್ಲಿಯೂ ಅಷ್ಟೇ ಪ್ರವೀಣರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net