ಜು. 21ರಂದು ಪುರಭವನದಲ್ಲಿ ‘ಬೋಲಾವ ವಿಠಲ’ ಸಂಗೀತ ಭಾರತಿ ಪ್ರತಿಷ್ಠಾನ ಪ್ರಸ್ತುತಿ

aaaa
Published on

ಮಂಗಳೂರು: ಸಂಗೀತ ಭಾರತಿ ಪ್ರತಿಷ್ಠಾನ ಸಹಯೋಗದಲ್ಲಿ ಬೋಲಾವ ವಿಠಲ ಸಂಗೀತ ಕಾರ‌್ಯಕ್ರಮ ಜು. 21ರಂದು ಸಂಜೆ 5ರಿಂದ ಪುರಭವನದಲ್ಲಿ ನಡೆಯಲಿದೆ.

ದೇಶದ ಹಲವು ಶ್ರೇಷ್ಠ ಸಂಗೀತ ಕಾರ‌್ಯಕ್ರಮಗಳನ್ನು ಆಯೋಜಿಸಿರುವ ಮುಂಬಯಿಯ ಪಂಚಮ್ ನಿಶಾದ್ ಸಂಸ್ಥೆಯ ಅಭೂತಪೂರ್ವ ಪರಿಕಲ್ಪನೆಯ ಕಾರ‌್ಯಕ್ರಮವಾಗಿರುವ ‘ಬೋಲಾವ ವಿಠಲ’ ವಿನೂತನ ಸಂತವಾಣಿ ಕಾರ‌್ಯಕ್ರಮವಾಗಿದೆ. ಹಿರಿಯ ದಿಗ್ಗಜ ಕಲಾವಿದೆ ಸಂಗೀತ ಕಟ್ಟಿ ಕುಲಕರ್ಣಿ ಮತ್ತು ಜೀ ಮರಾಠಿ ಸರಿಗಮಪ ಸಂಗೀತ ಸ್ಪರ್ಧೆಯ ಫೈನಲಿಸ್ಟ್ ಮುಗ್ಧ ವೈಶಂಪಾಯನ ಹಾಗೂ ಪ್ರಥಮೇಶ ಲಘಾಟೆ ಅವರಿಂದ ಅಭಂಗ ರೂಪದಲ್ಲಿ ಹಾಡುಗಾರಿಕೆ ನಡೆಯಲಿದೆ.

*ಏನಿದು ಬೋಲಾವ ವಿಠಲ?

ಪಂಚಮ್ ನಿಶಾದ್ ಸಂಸ್ಥೆಯು ಆಷಾಢ ಮಾಸದಲ್ಲಿ ‘ಬೋಲಾವ ವಿಠಲ’ ಶೀರ್ಷಿಕೆಯಡಿ ಪುಣೆ, ಮುಂಬಯಿ, ಹೊಸದಿಲ್ಲಿ, ಗೋವಾ, ಕೋಲ್ಕೊತಾ, ಬೆಂಗಳೂರು ಅಲ್ಲದೆ ದೇಶದ ನಾನಾ ಪ್ರಮುಖ ನಗರಗಳಲ್ಲಿ ಕಳೆದ ಹಲವು ದಶಕಗಳಿಂದ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದೆ. ನಗರವಾಸಿಗಳಿಗೆ ಸಂಗೀತದ ಶ್ರೇಷ್ಠತೆ ಪರಿಚಯಿಸಿದ ಬೋಲಾವ ವಿಠಲ್ ತಂಡವನ್ನು 2018ರಿಂದ ಸಂಗೀತ ಭಾರತಿ ಪ್ರತಿಷ್ಠಾನ ಪರಿಚಯಿಸಿತು. ಇದೀಗ ಮುಂದುವರಿದ ಭಾಗವಾಗಿ ಈ ವರ್ಷವೂ ಕಾರ‌್ಯಕ್ರಮ ಆಯೋಜಿಸುತ್ತಿದೆ.

ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಾದ ಹಿಂದೂಸ್ಥಾನಿ ಸಂಗೀತದ ಶ್ರೇಷ್ಠ ಕಲಾವಿದರಾದ ಬೆಂಗಳೂರಿನ ಸಂಗೀತ ಕಟ್ಟಿ ಕುಲಕರ್ಣಿ, ಮುಗ್ಧ ವೈಶಂಪಾಯನ ಮತ್ತು ಪ್ರಥಮೇಶ ಲಘಾಟೆ ಅವರ ಹಾಡುಗಾರಿಕೆಗೆ ತಬ್ಲಾದಲ್ಲಿ ಪ್ರಸಾದ್ ಪಾದ್ಯೆ, ಪಕ್‌ವಾಜ್‌ನಲ್ಲಿ ಸುಖದ್ ಮುಂಡೆ, ರಿದಂನಲ್ಲಿ ಸೂರ್ಯಕಾಂತ್ ಸುರ್ವೆ, ಹಾರ್ಮೋನಿಯಂನಲ್ಲಿ ಆದಿತ್ಯ ಒಕೆ, ಕೊಳಲಿನಲ್ಲಿ ಶಡಜ್ ಗೋಡ್ಕಿಂಡಿ ಸಾಥ್ ನೀಡಲಿದ್ದಾರೆ. ಬೋಲಾವ ವಿಠಲ ಕಾರ‌್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ಸಂಗೀತಾಸಕ್ತರು ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನಿಂದ ಪಾಸ್ ಜು.13ರ ಶನಿವಾರದಿಂದ ಪಡೆದುಕೊಳ್ಳಬಹುದು. ಪಾಸ್ ಹೊಂದಿರುವವರಿಗೆ ಮಾತ್ರ ಕಾರ‌್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.

----------------

ಅಭಂಗ್ ರೂಪದಲ್ಲಿ ಆರಾಧನೆ

ಪಾಂಡುರಂಗನಿಗೆ ಅಭಂಗ್ ರೂಪದಲ್ಲಿ ಆರಾಧನೆ ಶ್ರೇಷ್ಠ. ಪಂಡರಾಪುರದಲ್ಲಿ ಪ್ರತಿದಿನ ಇಂತಹ ಆರಾಧನೆಗಳು ನಡೆಯುತ್ತಿರುತ್ತವೆ. ಆದರೆ ಎಲ್ಲರಿಗೂ ಪಂಡರಾಪುರಕ್ಕೆ ಹೋಗಿ ಆರಾಧನೆ ಮಾಡಲಾಗುವುದಿಲ್ಲ ಎಂಬ ಕಾರಣಕ್ಕೆ ಈ ಕಾರ‌್ಯಕ್ರಮ ಆಯೋಜಿಸಲಾಗಿದೆ. ಇಲ್ಲಿ ಭಕ್ತಿ ಒಂದೆಡೆಯಾದರೆ, ಪ್ರತಿಭೆಯ ಅನಾವರಣ ಇನ್ನೊಂದೆಡೆ. ನಿಯಮಿತ ಕಾಲಮಿತಿಯನ್ನು ಕಲಾವಿದರು ತಮ್ಮ ಶ್ರೇಷ್ಠತೆಯನ್ನು ಅನಾವರಣಗೊಳಿಸಲಿದ್ದಾರೆ. ಇದರಿಂದಾಗಿ ಈ ಕಾರ‌್ಯಕ್ರಮದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಗೀತಪ್ರಿಯರಿಗೆ ವಿಭಿನ್ನ ಮಾದರಿಯ ಕಾರ‌್ಯಕ್ರಮ ಕೇಳಲು ಅವಕಾಶವಾಗಿದೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net