

ಬಂಟ್ವಾಳ: ಕಂಬಳ ಕ್ಷೇತ್ರದಲ್ಲಿ ಹಲವಾರು ಬಹುಮಾನಗಳನ್ನು ಗೆದ್ದುಕೊಂಡಿದ್ದ ಬಂಟ್ವಾಳ ತಾಲೂಕಿನ ಬೋಳಂತೂರು ದಿ.ಗಂಗಾಧರ ರೈ ಅವರ ಕಾಟಿ ಕೋಣ ಭಾನುವಾರ ರಾತ್ರಿ ಅಸುನೀಗಿದೆ.
ಸುಮಾರು 28 ವರ್ಷ ಪ್ರಾಯದ ಈ ಕೋಣ ಕಂಬಳ ಕ್ಷೇತ್ರದಲ್ಲಿ ಬೋಳಂತೂರು ಕಾಟಿಯೆಂದೇ ಪ್ರಸಿದ್ಧಿ ಪಡೆದಿತ್ತು. ಬಾರ್ಕೂರು ದೇವದಾಸ ಗಡಿಯಾರ್ ಕಾಟಿಯನ್ನು ಬಾಲ್ಯದಲ್ಲಿ ಪೋಷಿಸಿದ್ದು, ನೇಗಿಲು ಕಿರಿಯ ವಿಭಾಗದಲ್ಲಿ ಶಿರ್ವ ಕಂಬಳದಲ್ಲಿ ಮೊದಲ ಬಹುಮಾನ ಪಡೆದಿತ್ತು. ಶಿರ್ವ ವಿಶ್ವನಾಥ ಪ್ರಭು ಕಾಟಿಯನ್ನು ಓಡಿಸಿದ್ದರು. ಬಳಿಕ ಬಾರ್ಕೂರು ಶಾಂತಾರಾಮ ಶೆಟ್ಟಿ ಅವರ ಗರಡಿಯಲ್ಲಿ ಪಳಗಿತ್ತು. ಬಾರ್ಕೂರು ಶಾಂತಾರಾಮ ಶೆಟ್ಟಿ ಹಾಗೂ ದೇವದಾಸ ಗಡಿಯಾರ್ ಜತೆ ಸೇರಿ ಮೋಡ ಕೋಣದ ಜೋಡಿಯಾಗಿ ಕಾಟಿಯನ್ನು ಓಡಿಸಿದ್ದರು. ಸೀನಿಯರ್ ವಿಭಾಗಕ್ಕೆ ಅರ್ಹತೆ ಪಡೆಯುವ ಮೊದಲೇ ಚಾಂಪಿಯನ್ ಗೌರವಕ್ಕೆ ಪಾತ್ರವಾಗಿತ್ತು. ಬಳಿಕ ಬೆಳುವಾಯಿ ಸದಾನಂದ ಶೆಟ್ಟಿ ಕಾಟಿಯನ್ನು ತಮ್ಮ ಬಳಗಕ್ಕೆ ಸೇರಿಸಿ, ಅವರ ಮಾತಿಬೆಟ್ಟು ಕೋಣದ ಜತೆ ಸೇರಿಸಿ ಹಗ್ಗ ಹಿರಿಯ ವಿಭಾಗದಲ್ಲಿ ಓಡಿಸಿದ್ದರು.
2001ರಲ್ಲಿ ಬೋಳಂತೂರು ಗಂಗಾಧರ ರೈ ಕಾಟಿ-ಮಾತಿಬೆಟ್ಟು ಜೋಡಿಯನ್ನು ಖರೀದಿಸಿದ್ದು, ಪ್ರಾರಂಭದ 2 ವರ್ಷ ಅಜಿತ್‌ಕುಮಾರ್ ಜೈನ್ ಓಡಿಸಿದ್ದರು. ಬಳಿಕ ಅಶೋಕ್‌ಕುಮಾರ್ ಜೈನ್ ಓಡಿಸಿದ್ದು, ಈ ಸಂದರ್ಭ ಸತತ ಮೂರು ವರ್ಷಗಳ ಕಾಲ ಚಾಂಪಿಯನ್ ಆಫ್ ದಿ ಇಯರ್ ಪ್ರಶಸ್ತಿ ಪಡೆದಿತ್ತು.
ಬಳಿಕ ಮಂಜೇಶ್ವರ ಉದ್ಯಾವರ, ಮುನ್ನೆ, ಚಿತ್ರಾಪುರದ ಕುಟ್ಟಿ, ಬಿಳಿಯೂರು, ಗಂಗೆ ಮೊದಲಾದ ಕೋಣಗಳಿಗೆ ಜೋಡಿಯಾಗಿ ಪ್ರಶಸ್ತಿ ಪಡೆದಿದ್ದು, ಹಲವು ಮಂದಿ ಕಂಬಳ ಓಟಗಾರರು ಕಾಟಿಯನ್ನು ಓಡಿಸಿದ್ದರು. ಬೋಳಂತೂರು ಕಾಟಿಯು ಕನೆಹಲಗೆ ವಿಭಾಗದಲ್ಲೂ ಪ್ರಶಸ್ತಿ ಪಡೆದು ಮಿಂಚಿತ್ತು. ಇದರ ಅದ್ವಿತೀಯ ಸಾಧನೆಗಾಗಿ ಸುಮಾರು 3 ವರ್ಷಗಳ ಹಿಂದೆ ಪುತ್ತೂರು ಕಂಬಳದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಕಾಟಿಗೆ 25 ವರ್ಷ ತುಂಬಿದ ಸವಿನೆನಪಿಗಾಗಿ ಅದ್ದೂರಿಯಾಗಿ ಸನ್ಮಾನ ಮಾಡಲಾಗಿತ್ತು.
ಹಲವು ವರ್ಷಗಳಿಂದ ಕಂಬಳ ಕ್ಷೇತ್ರದಿಂದ ದೂರವಾಗಿ ವಿಶ್ರಾಂತಿಯಲ್ಲಿದ್ದ ಬೋಳಂತೂರು ಕಾಟಿಯ ನಿಧನ ಕಂಬಳಾಭಿಮಾನಿಗಳಿಗೆ ದು:ಖ ನೀಡಿದೆ. ಸೋಮವಾರ ಬೆಳಗ್ಗೆ ಸಕಲ ಗೌರವಗಳೊಂದಿಗೆ ಅಭಿಮಾನಿಗಳ ಸಮ್ಮುಖ ಅಂತ್ಯಕ್ರಿಯೆ ನಡೆಸಲಾಯಿತು.