

ದೇವನಹಳ್ಳಿ: ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ ಎನ್ನುವುದನ್ನು ಒಪ್ಪುವುದಿಲ್ಲ. ಬೊಕ್ಕಸ ಸರಿದೂಗಿಸುವ ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ 35 ಸಾವಿರ ಬಡ, ಮಧ್ಯಮವರ್ಗದ ಕುಟುಂಬಗಳಿಗೆ ಜೆಡಿಎಸ್‌ನಿಂದ ಹಂಚಲು ಸಿದ್ಧಪಡಿಸಿದ ದಿನಸಿ ಕಿಟ್‌ಗಳನ್ನು ಗ್ರಾಮೀಣ ಭಾಗಕ್ಕೆ ಕೊಂಡೊಯ್ಯಲು ಸಿದ್ಧವಾಗಿದ್ದ ನೂರಕ್ಕೂ ಹೆಚ್ಚು ಸರಕು ವಾಹನಗಳಿಗೆ ಹಸಿರು ನಿಶಾನೆ ತೋರಿ ಮಾತನಾಡಿದರು.
ನಮ್ಮ ಅವಧಿಯಲ್ಲಿ ರೈತರ ಸಾಲಮನ್ನಾ ಮಾಡಿದರೂ ಬೊಕ್ಕಸ ಸರಿದೂಗಿಸಲಾಗಿತ್ತು. ಕಾರ್ಮಿಕ ಇಲಾಖೆಯಲ್ಲಿ ಕೋಟ್ಯಂತರ ಹಣ ಇದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲಿ ಎಂದರು.
ಕರೊನಾ ತಡೆಗೆ ರಾಜ್ಯದಲ್ಲಿ ಹಲವು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅಂತಹವರನ್ನು ಪ್ರೋತ್ಸಾಹಿಸುವ ಜತೆಗೆ ಬೇಜವಾಬ್ದಾರಿಯಾಗಿ ಕೆಲಸ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ರಾಜ್ಯದಲ್ಲಿ ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸರ್ಕಾರಕ್ಕೆ ಸಹಕಾರ ನೀಡುವ ನಿಟ್ಟಿನಲ್ಲಿ ಕಾರ್ಮಿಕ ವಲಯ 40 ದಿನಗಳಿಂದಲೂ ಮನೆಯಲ್ಲಿದೆ. ಆದರೂ ಸೋಂಕು ನಿಯಂತ್ರಣವಾಗದೆ ದಿನೇದಿನೆ ಹೆಚ್ಚಾಗುತ್ತಿದೆ ಎಂದರು.
ಹಸಿರು ವಲಯದಲ್ಲಿದ್ದ ರಾಮನಗರ ಕ್ಷೇತ್ರಕ್ಕೆ ಕರೊನಾ ಮಾರಿ ಅಂಟಿಸುವ ಸಂಚಿನ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಶಾಸಕ ನಿಸರ್ಗ ನಾರಾಯಣಸ್ವಾಮಿ ಮತ್ತು ತಂಡದವರು 35 ಸಾವಿರ ಕುಟುಂಬಗಳಿಗೆ ದಿನಸಿ ತಲುಪಿಸುವ ಉತ್ತಮ ಕೆಲಸ ಮಾಡುತ್ತಿದ್ದಾರೆೆ. ಇದನ್ನು ಪ್ರೋತ್ಸಾಹಿಸಲು ಇಲ್ಲಿಗೆ ಬಂದಿದ್ದೇನೆ ಎಂದರು.
ಶಾಸಕ ನಿಸರ್ಗ ನಾರಾಯಣಸ್ವಾಮಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಶ್ರೀನಿವಾಸ್, ಕಾರ್ಯಾಧ್ಯಕ್ಷ ಆರ್.ಮುನೇಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಆರ್.ಮುನೇಗೌಡ, ತಾಲೂಕು ಸೊಸೈಟಿ ಅಧ್ಯಕ್ಷ ಮಂಡಿಬೆಲೆ ರಾಜಣ್ಣ, ತೂಬಗೆರೆ ಹೋಬಳಿಯ ಹಾಡೋನಳ್ಳಿ ಅಪ್ಪಯ್ಯಣ್ಣ ಇದ್ದರು.
ಅಂತ್ಯ ಸಂಸ್ಕಾರಕ್ಕೆ ವಿರೋಧ: ಮುಂಬಯಿಯಲ್ಲಿ ಸತ್ತ ವ್ಯಕ್ತಿಯಲ್ಲಿ ಮಂಡ್ಯಕ್ಕೆ ತಂದು ಮಣ್ಣು ಮಾಡುವ ಪ್ರಯತ್ನದಿಂದಾಗಿ ಮಂಡ್ಯದಲ್ಲಿ ವ್ಯಾಪಕವಾಗಿ ಕರೊನಾ ಹರಡಲು ಕಾರಣವಾಗಿದೆ. ಇದಕ್ಕೆ ಜಿಲ್ಲಾಡಳಿತದ ಅಧಿಕಾರಿಗಳ ಬೇಜವಾಬ್ದಾರಿ, ಸರ್ಕಾರದ ನಿರ್ಲಕ್ಷ್ಯವೇ ಕಾರಣ. ಪ್ರತಿ ಪಕ್ಷದಲ್ಲಿದ್ದರೂ ಸರ್ಕಾರ ತೆಗೆದುಕೊಳ್ಳುವ ಕ್ರಮಗಳಿಗೆ ಸಹಕರಿಸುತ್ತಲೇ ಬಂದಿದ್ದೇವೆ. ಸರ್ಕಾರಕ್ಕೆ ಜನಸಾಮಾನ್ಯರ ಪರಿಸ್ಥಿತಿ ರೈತರ ಕಷ್ಟ ಅರ್ಥವಾಗುತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ಉದ್ಯಮಿಗಳ ಮೇಲೆ ಇರುವ ಪ್ರೀತಿ, ಮಮಕಾರ ರೈತರು, ಕೂಲಿಕಾರ್ಮಿಕರ ಮೇಲೆ ಇಲ್ಲ ಎಂದು ಕುಮಾರಸ್ವಾಮಿ ದೂರಿದರು.