

ಮಡಿಕೇರಿ:
ಹೊಸ ಸರ್ಕಾರ ಬಂದು ಅರ್ಧ ವರ್ಷ ಕಳೆದರೂ ಕೊಡಗಿನಲ್ಲಿ ಇನ್ನೂ ಚುರುಕು ಕಾಣದಂತೆ ನಡೆಯುತ್ತಿರುವ ಆಡಳಿತಕ್ಕೆ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆ ಸಚಿವರಾದಿಯಾಗಿ ಇಬ್ಬರು ಶಾಸಕರೂ ಸರಿಯಾಗಿಯೇ ಬಿಸಿ ಮುಟ್ಟಿಸಿದರು. ಸಭೆಯ ಆರಂಭದಿAದಲೇ ಗರಂ ಆದ ಸಚಿವ ಬೋಸರಾಜು ‘ಇಂಥ ಕೆಟ್ಟ ಆಡಳಿತ ಎಲ್ಲೂ ನೋಡಿಲ್ಲ’ ಎಂದು ಉದ್ಘರಿಸಿದರು. ಹಿಂದಿನ ಕೆಡಿಪಿ ಸಭೆಯಲ್ಲಿ ಚರ್ಚೆಯಾದ ವಿಷಯಗಳು ಇನ್ನೂ ಹಾಗೇ ಉಳಿದಿರುವುದು ಜನಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಯಿತು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಅನುಪಾಲನಾ ವರದಿ ಮಂಡಿಸುವ ಸಂದರ್ಭದಲ್ಲಿ ಭಾಗಮಂಡಲ ಮೇಲ್ಸೇತುವೆ ಕಾಮಗಾರಿ ಬಗ್ಗೆ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಪ್ರಸ್ತಾಪಿಸಿದರು. ಆ ಸೇತುವೆ ಕೆಲಸ ಪೂರ್ಣವಾಗಲು ಇನ್ನೆಷ್ಟು ಸಮಯ ಬೇಕಾಗುತ್ತದೆ ಎಂದು ಪ್ರಶ್ನೆ ಮಾಡಿದರು ಮಾಡಿದÀರು. ಈ ವೇಳೆ ಮಧ್ಯಪ್ರವೇಶಿಸಿದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ವಿವರ ನೀಡಲು ಮುಂದಾದರು. ಇನ್ನು ಒಂದು ತಿಂಗಳಿನಲ್ಲಿ ಎಲ್ಲಾ ಕೆಲಸ ಪೂರ್ಣಗೊಳ್ಳುತ್ತದೆ ಎಂದು ಮಾಹಿತಿ ನೀಡಿದರು.
ನೀರಾವರಿ ನಿಗಮದ ಅಧಿಕಾರಿಗಳ ಉತ್ತರಿಂದ ಸಿಟ್ಟಾದ ಶಾಸಕ ಪೊನ್ನಣ್ಣ, ಕಳೆದ ಸಭೆಯಲ್ಲೂ ಇದೇ ರೀತಿಯ ಉತ್ತರ ಬಂದಿತ್ತು. ಎಲ್ಲಾ ಸಭೆಗಳಲ್ಲೂ ಹೀಗೆಯೇ ಹೇಳುತ್ತಾ ಹೋದರೆ ಕೆಲಸ ಮುಗಿಯುವುದು ಯಾವಾಗ ? ಸಾರ್ವಜನಿಕರಿಗೆ ಜನಪ್ರತಿನಿಧಿಗಳು ಏನು ಉತ್ತರ ಕೊಡಬೇಕು ಎಂದು ಪ್ರಶ್ನಿಸಿದರು. ಭಾಗಮಂಡಲ ಮೇಲ್ಸೇತುವೆ ಉದ್ಘಾಟನೆಗೆ ಮುಖ್ಯಮಂತ್ರಿ,, ಉಪಮುಖ್ಯಮಂತ್ರಿ ಬರುತ್ತಾರೆ. ಅದಕ್ಕೆ ದಿನಾಂಕ ನಿಗದಿ ಮಾಡಬೇಕು. ಆದರೆ ಕಾಮಗಾರಿ ಮಾತ್ರ ಇನ್ನೂ ಪೂರ್ಣವಾಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಆ ಅಧಿಕಾರಿ ‘ಈ ತಿಂಗಳಾAತ್ಯಕ್ಕೆ ನಿಶ್ಚಿತವಾಗಿಯೂ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲಾಗುವುದು,’ ಎಂದು ಭರವಸೆ ನೀಡಿದರು.
ಕಾವೇರಿ ನೀರಾವರಿ ನಿಗಮ ಪರವಾಗಿ ಕಿರಿಯ ಶ್ರೇಣಿ ಅಧಿಕಾರಿ ಉತ್ತರ ಕೊಡುತ್ತಿರುವುದನ್ನು ಗಮನಿಸಿದ ಬೋಸರಾಜು, ‘ನಿಮ್ಮ ಹಿರಿಯ ಅಧಿಕಾರಿಗಳು ಇಂಥ ಮಹತ್ವದ ಸಭೆಗೆ ಯಾಕೆ ಬಂದಿಲ್ಲ?’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ, ‘ಅವರು ಬೆಂಗಳೂರಿನಲ್ಲಿ ಎಂಡಿ ಕರೆದಿರುವ ಸಭೆಗೆ ಹೋಗಿರುವುದರಿಂದ ನನ್ನನ್ನು ಕಳುಹಿಸಿದ್ದಾರೆ,’ ಎಂದು ಉತ್ತರಿಸಿದರು. ಕೂಡಲೇ ತಮ್ಮ ಸಹಾಯಕರ ಮೇಲೆ ಬೇಂಗಳೂರಿಗೆ ಸಂಪರ್ಕ ಸಾಧಿಸಿದ ಸಚಿವ ಬೋಸರಾಜು ಅಲ್ಲಿ ಯಾವುದೇ ಸಭೆ ಕರೆಯದಿರುವುದನ್ನು ಖಚಿತಪಡಿಸಿಕೊಂಡು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಉತ್ತರ ಕೊಡುವುದನ್ನು ತಪ್ಪಿಸಿಕೊಳ್ಳಲು ಹಿರಿಯ ಅಧಿಕಾರಿಗಳು ಇಂಥ ಮಹತ್ವದ ಸಭೆಯಿಂದ ತಪ್ಪಿಸಿಕೊಳ್ಳುತ್ತಾರೆ. ಮುಂದೆ ಹೀಗಾದಂತೆ ನೋಡಿಕೊಳ್ಳಿ,’ ಎಂದು ಅಪರ ಜಿಲ್ಲಾಧಿಕಾರಿಗೆ ಉಸ್ತುವಾರಿ ಸಚಿವರು ಸೂಚಿಸಿದರು. ಅರಣ್ಯ ಇಲಾಖೆ ಪ್ರಗತಿ ಪರಿಶೀಲನೆ ಸಂದರ್ಭವೂ ಇದೇ ರೀತಿಯ ಪ್ರಕರಣ ಮರುಕಳಿಸಿತು. ತಿತಿಮತಿ ವ್ಯಾಪ್ತಿಯಲ್ಲಿ ಅರಣ್ಯ ಹಕ್ಕುಪತ್ರ ವಿತರಣೆ ಸಂಬAಧ ಅರಣ್ಯ ಇಲಾಖೆ ಮತ್ತು ಮತ್ತು ಕಂದಾಯ ಇಲಾಖೆ ಮಧ್ಯೆ ಸಂವಹನ ಕೊರತೆ ಬಗ್ಗೆ ಸಚಿವರು ಮಾಹಿತಿ ಬಯಸಿದಾಗ ಉತ್ತರ ಕೊಡಬೇಕಾಗಿದ್ದ ಪೊನ್ನಂಪೇಟೆ ತಹಸೀಲ್ದಾರ್ ಸಭೆಯಲ್ಲಿ ಇರಲಿಲ್ಲ. ಇವರ ಪರವಾಗಿ ಶಿರಸ್ತೆದಾರ್ ಉತ್ತರ ನೀಡಲು ಮಂದಾದಾಗ ಸಚಿವರು ಮತ್ತೆ ಗರಂ ಆದರು. ಶಿರಸ್ತೆದಾರ್‌ಗೆ ‘ಗೆಟ್ ಔಟ್’ ಎಂದು ಹೇಳಿದರೂ ಅವರು ಸಭೆಯಲ್ಲಿ ಕುಳಿತಿರುವುದನ್ನು ಗಮನಿಸಿ, ‘ಗೆಟ್ ಔಟ್ ಐಸೇ… ಹೋಗ್ರಿ ಹೊರಗೆ, ಇಲ್ಲಿ ನೀವು ಕಾಣಿಸಿಕೊಳ್ಳಬಾರದು,’ ಎಂದು ಗದರಿಸಿ ಹೊರಗೆ ಕಳುಹಿಸಿದರು.
‘ಕೆಡಿಪಿ ಸಭೆಗೆ ಅದರದ್ದೇ ಆದ ಮಹತ್ವ ಇದೆ. ಶಿರಸ್ತೆದಾರ್, ಪಿಡಿಒ ಬಂದು ಸಭೆಯಲ್ಲಿ ಕುಳಿತರೆ ಸಭೆ ನಡೆಸಲು ಆಗುವುದಿಲ್ಲ. ಹಾಜರಾತಿ ತೆಗೆದುಕೊಳ್ಳುವಾಗ ಇದನ್ನು ಗಮನಿಸಬೇಕು,’ ಎಂದು ಎಡಿಸಿಗೆ ಸಚಿವರು ಸೂಚಿಸಿದರು. ಈ ಬಗ್ಗೆ ಸರ್ಕಾರಕ್ಕೆ ಬರೆಯಿರಿ ಎಂದು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.
ತಿತಿಮತಿ ವ್ಯಾಪ್ತಿಯಲ್ಲಿ ಹಾಡಿಗಳು ಇರುವುದಿಲ್ಲ ಎಂದು ವಿರಾಜಪೇಟೆ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಾಲನಾ ವರದಿಯಲ್ಲಿ ಮಾಹಿತಿ ನೀಡಿದ್ದರು. ಆದರೆ ಹುಣಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಅಲ್ಲಿ ಹಾಡಿಗಳು ಇವೆ ಎಂದು ಸಭೆಯಲ್ಲಿ ಮಾಹಿತಿ ಕೊಟ್ಟಿದ್ದು ಗೊಂದಲಕ್ಕೆ ಕಾರಣವಾಯಿತು. ‘ಒಟ್ಟಾರೆ ಅರಣ್ಯ ಇಲಾಖೆ ಪರವಾಗಿ ಇಲ್ಲಿ ಮಾಹಿತಿ ಕೊಡಬೇಕು. ನಿಮ್ಮ ವಿಭಾಗವಾರು ಮಾಹಿತಿ ನಾವು ಕೇಳಿಲ್ಲ. ಎಲ್ಲಿ ನಿಮ್ಮ ಹಿರಿಯ ಅಧಿಕಾರಿ ?’ ಎಂದು ಪೊನ್ನಣ್ಣ ಡಿಸಿಎಫ್‌ಗೆ ಪ್ರಶ್ನಿಸಿದರು. ‘ಬೇರೆ ಸಭೆ ಕಾರಣದಿಂದ ಅವರು ಬಂದಿಲ್ಲ,’ ಎಂದು ಡಿಸಿಎಫ್ ಉತ್ತರಿಸುತ್ತಿದ್ದಂತೆಯೇ, ‘ಹಾಗಾದರೆ ನೀವು ಸುಮ್ಮನೆ ಕುಳಿತುಕೊಳ್ಳಿ,’ ಎಂದು ಗದರಿದರು.
ಕನ್ನಡ ಸಮುಚ್ಛಯ ಭವನ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ಆಯಿತು. ‘9 ಕೋಟಿ ರೂ. ವೆಚ್ಚದ ಕಟ್ಟಡ ಕಾಮಗಾರಿ 9 ವರ್ಷವಾದರೂ ಮುಗಿದಿಲ್ಲ,’ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಲೋಕೋಪಯೋಗಿ ಇಲಾಖೆಯಿಂದ ಯಾವುದೇ ಕೆಲಸಗಳು ನೆಟ್ಟಗೆ ನಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿ ತಡೆಗೋಡೆಗೆ 3 ತಿಂಗಳಿಗೊಮ್ಮೆ ಹೊಸ ಟಾರ್ಪಲ್ ಹೊದಿಸುವುದು ಬಿಟ್ಟರೆ ಇನ್ನೇನೂ ನಡೆಯುತ್ತಿಲ್ಲ ಎಂದರು.
ಲೋಕೋಪಯೋಗಿ ಇಲಾಖೆ ಕಾಮಗಾರಿಗಳು ಎಲ್ಲಾ ಕಡೆಯಲ್ಲೂ ಆಮೆ ವೇಗದಲ್ಲಿ ನಡೆಯುತ್ತಿರುವ ಬಗ್ಗೆ ಉಭಯ ಶಾಸಕರು ಉಸ್ತುವಾರಿ ಸಚಿವರ ಗಮನಕ್ಕೆ ತಂದರು. ವಿವಿಧ ಇಲಾಖೆಗಳ ವಿಳಂಭ ಧೋರಣೆ ಬಗ್ಗೆ ಸಭೆಯಲ್ಲಿ ಕೇಳಿ ಬೇಸತ್ತಿದ್ದ ಸಚಿವರು, ‘ಇಂಥ ಕೆಟ್ಟ ಆಡಳಿತ ಎಲ್ಲಿಯೂ ನೋಡಿಲ್ಲ. ಕೊಡಗಿನಂತಹ ಪ್ರಜ್ಞಾವಂತರ ಜಿಲ್ಲೆಯಲ್ಲೇ ಹೀಗೆ ಆಗಬೇಕಾದರೆ ಬೇರೆ ಕಡೆ ಇನ್ನು ಹೇಗಿರಬಹುದು? ಜನರು ಬಯಸಿದ ಸರ್ಕಾರ ಈಗ ಇದೆ. ಸರ್ಕಾರಕ್ಕೂ ಜನರಿಗೆ ಒಳ್ಳೆಯದು ಮಾಡುವ ಇಚ್ಛಾಶಕ್ತಿ ಇದೆ. ಆದರೆ ಅಧಿಕಾರಿಗಳು ಮಾಡುವ ತಪ್ಪು ಕೆಲಸಗಳಿಂದ ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಕೆಟ್ಟ ಅಭಿಪ್ರಾಯ ಹುಟ್ಟಿಕೊಳ್ಳುತ್ತದೆ. ನಿಮ್ಮಂಥ ಅಧಿಕಾರಿಗಳಿಂದ ಕೆಟ್ಟ ಹೆಸರು ಬರುತ್ತದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇವರ ಬಗ್ಗೆ ಸರ್ಕಾರಕ್ಕೆ ಬರೆಯಿರಿ. ಅಮಾನತ್ತು ಆಗಿ ಮನೆಗೆ ನಡೆಯಲಿ ಎಂದು ಜಿಲ್ಲಾಧಿಕಾರಿಗೆ ಹೇಳಿದರು.
ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ವೆಂಕಟ್‌ರಾಜ, ಎಸ್‌ಪಿ ಕೆ. ರಾಮರಾಜನ್, ಉಪ ವಿಭಾಗಾಧಿಕಾರಿ ವಿನಾಯಕ್ ನರ್ವಾಡೆ, ಕೊಡಗು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಇದ್ದರು.