ಪ್ರವೃತ್ತಿಗೆ ನೀರೆರೆದಾಗಲೇ ಕೊಡುಗೆ ಸಾಧ್ಯ,  ಬೊಗಸೆ ನೀರು ಪುಸ್ತಕ ಬಿಡುಗಡೆ ಮಾಡಿದ ಸಭಾಪತಿ ಹೊರಟ್ಟಿ ಅಭಿಮತ

IMG-20250630-WA0000-1.jpg
Published on

ಹುಬ್ಬಳ್ಳಿ: ಬಹುತೇಕರು ವೃತ್ತಿಯೊಂದನ್ನೇ ಮಾಡಿಕೊಂಡಿರುತ್ತಾರೆ. ಆದರೆ, ಜೀವನದಲ್ಲಿ ಸಾಧನೆ ಮಾಡಬೇಕಾದರೆ ವೃತ್ತಿಯೊಂದಿಗೆ ಹವ್ಯಾಸಗಳಿಗೆ ಇಂಬುಕೊಡಬೇಕು, ಈ ನಿಟ್ಟಿನಲ್ಲಿ ಪತ್ರಕರ್ತ ಅರುಣಕುಮಾರ ಹಬ್ಬು ಅವರು ಎರಡನ್ನೂ ನಿಭಾಯಿಸಿಕೊಂಡು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಇಲ್ಲಿಯ ಹವ್ಯಕ ಭವನದಲ್ಲಿ ಭಾನುವಾರ ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ, ಸಂಯುತಾ ಪ್ರತಿಷ್ಠಾನ, ಕನ್ನಡ ಧ್ವನಿ ಟ್ರಸ್ಟ್ ಹಾಗೂ ಹುಬ್ಬಳ್ಳಿ ಧಾರವಾಡ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಹಿರಿಯ ಪತ್ರಕರ್ತ ಅರುಣಕುಮಾರ ಹಬ್ಬು ಅವರು ಬರೆದ ಅಂತರಂಗದ ಅನಾವರಣ "ಬೊಗಸೆ ನೀರು' ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಇಂದು ಓದುವ ಹವ್ಯಾಸ ಬಹಳಷ್ಟು ಜನರಲ್ಲಿ ಕಡಿಮೆಯಾಗಿದೆ. ಆದರೆ, ಉತ್ತಮ ಬದುಕಿಗೆ ಮಾರ್ಗದರ್ಶನ ಬೇಕಾದರೆ ಸಾಹಿತ್ಯ ಕೃತಿಗಳನ್ನು ಹೆಚ್ಚು ಓದಬೇಕು. ಮಕ್ಕಳಲ್ಲಿ ಇಂತಹ ಸಂಸ್ಕೃತಿ ಬೆಳೆಸಬೇಕು. ಶಿಕ್ಷಕರು ಮಾರ್ಗದರ್ಶನ ಮಾಡಬೇಕು ಎಂದು ಸಲಹೆ ನೀಡಿದರು.

ಮೊದಲು ಶಿಕ್ಷಣ ವ್ಯವಸ್ಥೆ ಬಹಳಷ್ಟು ಉತ್ತಮವಾಗಿತ್ತು. ಹಬ್ಬು ಅವರು ಸಹ ತಮ್ಮ ಶಾಲಾ ದಿನಗಳನ್ನು ಕೃತಿಯಲ್ಲಿ ನೆನಪಿಸಿಕೊಂಡಿದ್ದಾರೆ. ಶ್ರೇಷ್ಠ ಬರಹಗಾರರಾಗಿರುವ ಅವರು ಬೊಗಸೆ ನೀರು ಬರೆದದ್ದು ಹೆಮ್ಮೆಯ ಅಭಿಮಾನದ ಸಂಗತಿ. ಪತ್ರಿಕಾ ರಂಗ ಗೌರವ ಉಳಿಸಿಕೊಂಡಿದ್ದರೆ ಅದಕ್ಕೆ ಉತ್ತಮ ಬರವಣಿಗೆಯೇ ಕಾರಣ ಎಂದರು.

ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಕೃತಿ ತಲೆ ಬರಹವೇ ಅತ್ಯಂತ ಅರ್ಥರ್ಪೂಣವಾಗಿದೆ. ತಮ್ಮ ಇಡೀ ಜೀವನವೆಂಬ ಸಾಗರವನ್ನು ಬೊಗಸೆಯಲ್ಲಿ ಹಿಡಿದು ಕೊಟ್ಟಿದ್ದೇನೆ ಎಂಬ ಸಂದೇಶ ಇದರಲ್ಲಿದೆ. ಪತ್ರಕರ್ತ ಯಾವಾಗಲೂ ಸ್ಥಿತಪ್ರಜ್ಞನಾಗಿರಬೇಕು. ಆಗಲೇ ಯಾವುದೇ ಓಲೈಕೆ ಇಲ್ಲದೇ ವರದಿಗಾರಿಕೆ ಮಾಡಲು ಸಾಧ್ಯ. ಪತ್ರಕರ್ತರ ತಳಮಳ, ಸಂಕಷ್ಟ, ಬದುಕು ಎಲ್ಲವನ್ನು ಇದರಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದರು.

ಹುಬ್ಬಳ್ಳಿಯಲ್ಲಿ ಸಾಹಿತ್ಯ ಚಟುವಟಿಕೆಗೆ ಜನ ಬರುತ್ತಾರೆ. ಹಾಗಾಗಿ ಸಂಘದಿಂದ ಇಲ್ಲಿಯೂ ಸಾಹಿತ್ಯದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಪತ್ರಕರ್ತೆ ಆರ್. ರ್ಪೂಣಿಮಾ ಮಾತನಾಡಿ, ಹಬ್ಬು ಸಹೋದರರು ಬಹಳಷ್ಟು ಸೃಜನಶೀಲರು. ಅರುಣಕುಮಾರ ಅವರು ಪತ್ರಕರ್ತರಾಗಿ ತಮ್ಮ ಜೀವನ ಕಥೆ ಬರಿದಿರುವುದು ಅವರು ವೃತ್ತಿಯನ್ನು ಮೀರಿ ಬೆಳೆದಿರುವುದಕ್ಕೆ ಸಾಕ್ಷಿ. ವೃತ್ತಿ ಜೀವನದ ಹಲವು ಸವಾಲುಗಳನ್ನು ದಾಖಲಿಸಿದ್ದಾರೆ. ವರದಿಗಾರರಾಗಿ ಆಯಾ ಪ್ರದೇಶದ ಸಂಸ್ಕೃತಿ, ಪರಂಪರೆ ಅರಿಯುವುದು ಕಷ್ಟದ ಕೆಲಸ. ಆದರೂ, ಇವರು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಇದ್ದು ವೃತ್ತಿಪರತೆ ಮೆರೆದರು ಎಂದರು.

ಪತ್ರಕರ್ತ, ಕೃತಿಕಾರ ಅರುಣಕುಮಾರ ಹಬ್ಬು ಮಾತನಾಡಿ, ಪ್ರತಿಯೊಬ್ಬರ ಜೀವನವೂ ಒಂದು ಸಂದೇಶ. ನನ್ನ ಬದುಕಿನ ಅನುಭವ ದಾಖಲಿಸುವ ಹಂಬಲ ಇರಲಿಲ್ಲ. ಆದರೆ, ನನ್ನ ಹಿತೈಷಿಗಳು ಬರೆಯಲು ಪ್ರೇರಣೆ ನೀಡಿದರು. ಆರು ಜನ ಮಕ್ಕಳ ಕುಟುಂಬದಲ್ಲಿ ತಂದೆ ತೀರಿದ ನಂತರ ಜೀವನ ಎಂಬುದು ಹೇಗೆ ಸವಾಲಾಗಿತ್ತು. ಅದರ ಮಧ್ಯೆ ಸಮಾಜ ನನಗೆ ಏನು ಕೊಟ್ಟಿತು, ಸವಾಲುಗಳನ್ನು ಹೇಗೆ ಎದುರಿಸಿದೆ ಎಂಬುದನ್ನು ಕೃತಿಯಲ್ಲಿ ಹೇಳಿದ್ದೇನೆ ಎಂದರು.

ಹಬ್ಬು ಕುಟುಂಬದ ಮೋಹನ, ರಾಮಚಂದ್ರ, ಉದಯಕುಮಾರ, ಜಯಪ್ರಕಾಶ, ಅರುಣಕುಮಾರ ಅವರನ್ನು ಸನ್ಮಾನಿಸಲಾಯಿತು.

ಸುಶಿಲೇಂದ್ರ ಕುಂದರಗಿ, ಹವ್ಯಕ ಸಮಾಜದ ವಿ.ಎಂ. ಭಟ್, ಡಾ. ಲಿಂಗರಾಜ ಮುಳ್ಳಳ್ಳಿ, ಡಾ. ಮಹೇಶ ಹೊರಕೇರಿ, ಸಂತೋಷ ವೆರ್ಣೇಕರ, ಪತ್ರಕರ್ತರು, ಸಾಹಿತಿಗಳು, ಹಬ್ಬು ಅವರ ಅಭಿಮಾನಿಗಳು ಪಾಲ್ಗೊಂಡಿದ್ದರು.
ವೀರೇಶ ಹಂಡಿಗಿ ನಿರೂಪಿಸಿದರು. ಪತ್ರಕರ್ತ ಗಣಪತಿ ಗಂಗೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net