ಸೌಪರ್ಣಿಕಾ ನದಿ ಪಾಲಾಗಿದ್ದ ಮಹಿಳೆ ಶವ ಪತ್ತೆ

byn (3)
Published on

ಬೈಂದೂರು: ಕೊಲ್ಲೂರಿನ ಸೌಪರ್ಣಿಕಾ ನದಿಯಲ್ಲಿ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಮಹಿಳೆಯ ಮೃತದೇಹ ಶನಿವಾರ ಪತ್ತೆಯಾಗಿದೆ. ಬೆಂಗಳೂರು ತ್ಯಾಗರಾಜ ನಗರ ನಿವಾಸಿ ಸಿ.ಆರ್.ಗೋವಿಂದರಾಜು ಎಂಬುವರ ಪುತ್ರಿ ವಸುಧಾ ಚಕ್ರವರ್ತಿ(46) ಗುರುವಾರ ಕೊಲ್ಲೂರಿಗೆ ಆಗಮಿಸಿದ್ದರು. ಖಾಸಗಿ ವಸತಿಗೃಹದ ಬಳಿ ಕಾರು ನಿಲ್ಲಿಸಿ ಆಂಜನೇಯ ದೇಗುಲಕ್ಕೆ ತೆರಳಿ ನಂತರ ಸೌಪರ್ಣಿಕಾ ನದಿಯತ್ತ ಹೋದವರು ನಾಪತ್ತೆಯಾಗಿದ್ದರು.

ಪೊಲೀಸರು ಹಾಗೂ ಗ್ರಾಮಸ್ಥರು ಸೌಪರ್ಣಿಕಾ ನದಿ ಸಹಿತ ವಿವಿಧೆಡೆ ಹುಡುಕಾಡಿದರೂ ಸುಳಿವು ಸಿಕ್ಕಿರಲಿಲ್ಲ. ಆಕೆಯ ಮೊಬೈಲ್ ಫೋನ್ ಹಾಗೂ ಇನ್ನಿತರ ವಸ್ತುಗಳು ಕಾರಿನೊಳಗೆ ಕಂಡುಬಂದಿದ್ದು, ಕುಟುಂಬಕ್ಕೆ ವಿಷಯ ತಿಳಿಸಲಾಗಿತ್ತು. ಸೌಪರ್ಣಿಕಾ ನದಿಯತ್ತ ತೆರಳಿದ್ದ ವಸುಧಾ ಈಜಾಡುತ್ತಿದ್ದ ತುಂಬ ದೂರದ ತನಕ ಹೋಗಿರುವ ದೃಶ್ಯ ದೇಗುಲದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದರಂತೆ ಮುಳುಗು ತಜ್ಞ ಈಶ್ವರ ಮಲ್ಪೆ, ಅಗ್ನಿಶಾಮಕ ದಳದವರು ಶುಕ್ರವಾರ ಬಹಳ ಹೊತ್ತು ನದಿಯಲ್ಲಿ ಹುಡುಕಾಡಿದರೂ ಮಹಿಳೆಯ ಸುಳಿವು ಸಿಕ್ಕಿರಲಿಲ್ಲ. ಶನಿವಾರ ಮಾವಿನಕಾರು ಎಂಬಲ್ಲಿ ಮೃತದೇಹ ಪತ್ತೆಯಾಗಿದೆ.

ವಿವಾಹಿತರಾಗಿದ್ದ ವಸುಧಾ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಇತ್ತೀಚೆಗೆ ಊರಿಗೆ ಬಂದು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಕೊಲ್ಲೂರು ಠಾಣಾಧಿಕಾರಿ ವಿನಯ್ ಕೊರ್ಲಹಳ್ಳಿ ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net