ಕನವಳ್ಳಿ ಶಿಬಾರ ಬಳಿ ಶವ ಪತ್ತೆ

28GTL1A
Published on

ಗುತ್ತಲ: ಯುವಕನೋರ್ವನ ಶವ ಗುತ್ತಲ ಹೋಬಳಿಯ ಕನವಳ್ಳಿ ಶಿಬಾರ (ಸೋಮನಕಟ್ಟಿ) ಬಳಿ ಗುರುವಾರ ಬೆಳಗ್ಗೆ ಪತ್ತೆಯಾಗಿದ್ದು, ಕೊಲೆ ಮಾಡಿ ರಸ್ತೆ ಪಕ್ಕಕ್ಕೆ ಎಸೆದು ಹೋಗಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ 9ನೇ ವಾರ್ಡಿನ ತುಂಗಭದ್ರ ಬಡಾವಣೆ ನಿವಾಸಿ ನವೀನ ಹೇಮಂತ ರಾಥೋಡ (26) ಮೃತಪಟ್ಟಿದ್ದಾನೆ. ನವೀನ ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಾನಾಪುರ ತಾಂಡದ ನಿವಾಸಿಯಾಗಿದ್ದಾನೆನ್ನಲಾಗಿದೆ.

ಅತೀ ಸಾರಾಯಿ ಕುಡಿತ ಹಾಗೂ ಸಿಗರೇಟ್ ಚಟ ಹೊಂದಿದ್ದ ನವೀನ ಮನೆಯ ಮಹಡಿಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದು, ಹೇಳದೇ ಕೇಳದೆ ಮನೆಯಿಂದ ಹೊರಗಡೆ ಹೋಗುತ್ತಿದ್ದ, ಅಲ್ಲದೆ, ಹಡಗಲಿಯಲ್ಲಿ ಕಳ್ಳತನ ಪ್ರಕರಣದ ಆರೋಪದಲ್ಲಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದ. ಬುಧವಾರ ನವೀನ ತನ್ನ ಮನೆಯ ಸದಸ್ಯರಿಗೆ ನಾನು ಹುಬ್ಬಳ್ಳಿಗೆ ಹೋಗುತ್ತಿದ್ದೇನೆ. ನನಗೆ 600 ರೂ. ಹಣ ಬೇಕೆಂದು ಹೇಳಿ ತನ್ನ ತಾಯಿಯಿಂದ ಹಣವನ್ನು ಪಡೆದು ಹೋಗಿದ್ದಾನೆ. ಗುರುವಾರ ಬೆಳಗಿನ ಜಾವ ಗುತ್ತಲ-ಹಾವೇರಿ ರಸ್ತೆ ಮಾರ್ಗದ ಕನವಳ್ಳಿ ಶಿಬಾರ (ಸೋಮನಕಟ್ಟಿ) ಬಳಿ ರಸ್ತೆ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ನವೀನನ್ನು ಯಾರೋ ಹೊಡೆದು ಕುತ್ತಿಗೆಗೆ ಹಗ್ಗದಿಂದ ಬಿಗಿದು ಹತ್ಯೆ ಮಾಡಿರುವ ಬಗ್ಗೆ ಮೇಲ್ನೋಟಕ್ಕೆ ಶಂಕೆ ವ್ಯಕ್ತಪಡಿಸಿರುವ ಕುಟುಂಬ ಸದಸ್ಯರು, ಆರೋಪಿಗಳನ್ನು ಪತ್ತೆ ಮಾಡುವಂತೆ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಶ್ವಾನ ದಳ ಹಾಗೂ ವಿಧಿ ವಿಜ್ಞಾನ ಸಿಬ್ಬಂದಿ ಆಗಮಿಸಿ ಪರಿಶೀಲಿಸಿದರು. ಎಸ್ಪಿ ಹನುಮಂತರಾಯ, ಹೆಚ್ಚುವರಿ ಎಸ್ಪಿ ವಿಜಯಕುಮಾರ ಎಂ. ಸಂತೋಷ, ಡಿವೈಎಸ್ಪಿ ಡಾ. ಶಿವಾನಂದ ಚಲವಾದಿ, ಸಿಪಿಐ ಕೆ. ನಾಗಮ್ಮ, ಪಿಎಸ್​ಐಗಳಾದ ಜಿ. ಜಗದೀಶ, ಎಂ.ಇ ಮಣ್ಣಣ್ಣನವರ, ಎಎಸ್​ಐ ಬಿ.ವೈ. ಚಳಗೇರಿ, ಮುಖ್ಯ ಪೇದೆ ಬಿ.ಸಿ. ಬಾಣಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net