ಅರೆಬೆಂದ ಸ್ಥಿತಿಯಲ್ಲಿ ಮೃತದೇಹ ಪತ್ತೆ

Crime Logo
Published on

ನಾಗಮಂಗಲ: ತಾಲೂಕಿನ ದೇವಲಾಪುರ ರಸ್ತೆಯಲ್ಲಿರುವ ತಟ್ಟಹಳ್ಳಿ ಅರಣ್ಯ ಪ್ರದೇಶದಲ್ಲಿ ಕೊಳೆತ ಮತ್ತು ಅರೆಬೆಂದ ಸ್ಥಿತಿಯಲ್ಲಿ ಅಪರಿಚಿತ ಪುರುಷನ ಮೃತದೇಹ ಪತ್ತೆಯಾಗಿದೆ.

ಅರಣ್ಯ ಪ್ರದೇಶದಲ್ಲಿ ಹಾಯ್ದುಹೋಗಿರುವ ಹೇಮಾವತಿ ನಾಲೆ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಹಿಟಾಚಿ ಯಂತ್ರದಲ್ಲಿ ಗಿಡಗಂಟಿಗಳನ್ನು ತೆರವುಗೊಳಿಸುತ್ತಿದ್ದ ವೇಳೆ ಮೃತದೇಹ ಪತ್ತೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ರಾಜೇಂದ್ರ ಪರಿಶೀಲನೆ ನಡೆಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಸುಮಾರು 25 ರಿಂದ 40ವರ್ಷದೊಳಗಿನ ವ್ಯಕ್ತಿಯನ್ನು ದುಷ್ಕರ್ಮಿಗಳು ದುರುದ್ದೇಶದಿಂದ ಎಲ್ಲಿಯೋ ಕೊಲೆ ಮಾಡಿ ಅರಣ್ಯ ಪ್ರದೇಶಕ್ಕೆ ತಂದು ಸಾಕ್ಷ್ಯ ನಾಶಪಡಿಸಲು ಟೈರ್‌ಗಳನ್ನು ಬಳಸಿ ಗುರುತು ಸಿಗದಂತೆ ಅರೆಬರೆ ಸುಟ್ಟು ಹಾಕಿರಬಹುದೆಂದು ಶಂಕಿಸಲಾಗಿದೆ. ಮೃತದೇಹದ ಮೇಲೆ ನೀಲಿ ಬಣ್ಣದ ಪ್ಯಾಂಟ್ ತುಣುಕು ಇದ್ದು, ಕೈ ಮೇಲೆ ಓಂ ಚಿತ್ರ ಸಹಿತ ಕೆಂಪು ಮಣಿಗಳುಳ್ಳ ದಾರವಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್‌ಪಿ ಚಲುವರಾಜು, ಸಿಪಿಐ ನಿರಂಜನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತದೇಹವನ್ನು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರದಲ್ಲಿರಿಸಿರುವ ಪೊಲೀಸರು, ಯಾವುದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪುರುಷ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದ್ದರೆ ಅಥವಾ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದಲ್ಲಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net