ಶರೀರದ ಅಧಿಕ ಕೊಬ್ಬಿನಂಶ ಭಾರತೀಯರ ನಂ.1 ಶತ್ರು

St 1
Published on

ಹುಬ್ಬಳ್ಳಿ: ಭಾರತೀಯರಲ್ಲಿ ಶರೀರದ ಕೊಬ್ಬಿನಂಶ (ಲಿಪಿಡ್ ಪ್ರಮಾಣ) ಎಷ್ಟಿರಬೇಕು ಎಂಬ ಕುರಿತು ಭಾರತೀಯ ಲಿಪಿಡ್ ಸಂಸ್ಥೆ ಏಪ್ರಿಲ್​ನಲ್ಲಿ ಮಾರ್ಗಸೂಚಿ ಬಿಡುಗಡೆ ಮಾಡಲಿದೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನವರೂ ಹೃದಯಾಘಾತಕ್ಕೆ ಒಳಗಾಗುತ್ತಿರುವುದರಿಂದ, ವಿಶೇಷ ಕೊಬ್ಬಿನ ಪ್ರಮಾಣ, ಅಂದರೆ ಎಲ್​ಪಿ(ಲಿಟಲ್ ಎ)ಯನ್ನೂ ಲಿಪಿಡ್ ಟೆಸ್ಟ್ ಮಾರ್ಗಸೂಚಿಯಲ್ಲಿ ಸೇರ್ಪಡೆ ಮಾಡಬೇಕು ಎಂದು ಚೆನ್ನೈನಲ್ಲಿ ಇತ್ತೀಚೆಗೆ ನಡೆದ ಲಿಪಿಡ್ ಅಸೋಸಿಯೇಷನ್ ರಾಷ್ಟ್ರೀಯ ಸಮ್ಮೇಳನ ಶಿಫಾರಸು ಮಾಡಿದೆ.

ಸಮ್ಮೇಳನದಲ್ಲಿ ಹುಬ್ಬಳ್ಳಿಯ ಪ್ರಖ್ಯಾತ ಹೃದ್ರೋಗ ತಜ್ಞ ಡಾ. ಜಿ.ಬಿ. ಸತ್ತೂರ ಮಾತನಾಡಿ, ಭಾರತೀಯ ಮಹಿಳೆಯರಿಗೆ ಮನೆಗೆಲಸದಿಂದಲೇ ಸಾಕಷ್ಟು ವ್ಯಾಯಾಮ ಲಭಿಸುತ್ತದೆ ಎಂಬ ಅಭಿಪ್ರಾಯವಿದೆ. ಆದರೆ, ಇದು ಸತ್ಯಕ್ಕೆ ದೂರ. ಹೃದಯವನ್ನು ಗಟ್ಟಿಗೊಳಿಸಿಕೊಳ್ಳಲು ಮಹಿಳೆಯರೂ ನಿತ್ಯ 30-45 ನಿಮಿಷ ಬಿರುಸಾಗಿ ನಡೆಯುವುದು ಅಗತ್ಯ ಎಂದು ಸಲಹೆ ನೀಡಿದರು.

ಮಾನವರಿಗೆ ದೈಹಿಕ ಶ್ರಮದ ಚಟುವಟಿಕೆಗಳು ಅತ್ಯಗತ್ಯ. ಈ ನಿಟ್ಟಿನಲ್ಲಿ ಶಾಲಾ -ಕಾಲೇಜುಗಳು ವಿದ್ಯಾರ್ಥಿಗಳ ಶಾರೀರಿಕ ಚಟುವಟಿಕೆಗಳಿಗೆ ಅಗತ್ಯ ಮೈದಾನ ಹೊಂದಿರಬೇಕು. ಸೂಕ್ತ ಮೈದಾನ ಹೊಂದಿಲ್ಲದಿದ್ದರೆ ಶೈಕ್ಷಣಿಕ ಸಂಸ್ಥೆಗಳಿಗೆ ಸರ್ಕಾರ ಪರವಾನಗಿ ನೀಡಬಾರದು. ಬೇಸರದ ಸಂಗತಿ ಎಂದರೆ ಈ ನಿಯಮಗಳನ್ನು ಸರ್ಕಾರ ಪಾಲಿಸುವುದು ಬಹಳ ಕಡಿಮೆ ಎಂದರು.

ಕೆಟ್ಟ ಕೊಬ್ಬು (ಎಲ್​ಡಿಎಲ್ ಕೊಲೆಸ್ಟ್ರಾಲ್) ಪ್ರಮಾಣ 160 ಎಂ.ಜಿ.ಗಿಂತ ಹೆಚ್ಚು ಇದ್ದಲ್ಲಿ, ತಜ್ಞ ವೈದ್ಯರು ಸ್ಟ್ಯಾಟಿನ್ ಮಾತ್ರೆ ತೆಗೆದುಕೊಳ್ಳಲು ಸಲಹೆ ನೀಡುವುದು ಸಾಮಾನ್ಯ. ಇದು ಸುರಕ್ಷಿತ ಔಷಧವಾಗಿದ್ದು, ಜೀವನಪರ್ಯಂತ ಸೇವಿಸಬೇಕು. ಕೆಲ ಪ್ರಕರಣಗಳಲ್ಲಿ ಮಾತ್ರ ಸ್ಟ್ಯಾಟಿನ್​ನಿಂದ ಸ್ನಾಯು ನೋವು ಅಥವಾ ಲಿವರ್​ನ ಮೇಲೆ ಅಡ್ಡ ಪರಿಣಾಮವಾಗಬಹುದು. ರೋಗಿಗಳು ಯು ಟ್ಯೂಬ್ ಅಥವಾ ಸುಳ್ಳು ಸುದ್ದಿ ನಂಬಿ ಸ್ಟ್ಯಾಟಿನ್ ಸೇವನೆ ಬಿಟ್ಟುಬಿಡುವುದಿದೆ. ಇದು ಸಲ್ಲದು. ಬದಲಾಗಿ ಮಾತ್ರೆ ಪ್ರಮಾಣ ಕುರಿತು ತಜ್ಞ ವೈದ್ಯರಿಂದ ಸಲಹೆ ಪಡೆಯಬೇಕು. ಎಲ್​ಡಿಎಲ್ ಕೊಲೆಸ್ಟ್ರಾಲ್ ಪ್ರಮಾಣ 160 ಎಂ.ಜಿ.ಗಿಂತ ಜಾಸ್ತಿ ಇರುವ ರೋಗಿಯ ಇಡೀ ಕುಟುಂಬ ವರ್ಗದವರೂ ಕೊಬ್ಬಿನಾಂಶ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಗತ್ಯ ಎಂದು ಡಾ. ಸತ್ತೂರ ವಿವರಿಸಿದರು.

ದೆಹಲಿಯ ಡಾ. ರಮಣ ಪುರಿ ಮಾತನಾಡಿ, ಕೆಟ್ಟ ಕೊಬ್ಬು ಹಲವು ಅಪಾಯ ತಂದೊಡ್ಡುತ್ತದೆ. ಆದ್ದರಿಂದ, ಕಾಲೇಜು ಪ್ರವೇಶ ನೀಡುವಾಗಲೇ ಪ್ರತಿ ವಿದ್ಯಾರ್ಥಿಯ ಶರೀರದಲ್ಲಿನ ಕೊಬ್ಬಿನ ಅಂಶ ಪರೀಕ್ಷೆ ನಡೆಸುವಂಥ ಕ್ರಮ ಜಾರಿಯಾಗಬೇಕಾಗಿದೆ ಎಂದರು.

ಅಮೆರಿಕದ ಪ್ರೊ. ನಥಾನ್ ವೊಂಗ್, ಭಾರತೀಯರಲ್ಲಿ ಹೃದಯಾಘಾತದಿಂದ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಆಘಾತಕಾರಿ ಎಂದರೆ, ಡಾ. ಬಾರ್ತನ್ ಡುಯೆಲ್, ಸರ್ಕಾರಗಳು ಪ್ರತಿ ರಸ್ತೆ ಪಕ್ಕದಲ್ಲೂ ವಿಶಾಲವಾದ ಫುಟ್​ಪಾತ್ ನಿರ್ವಿುಸಿ, ಪ್ರದೂಷಣೆಯಿಲ್ಲದ ವಾತಾವರಣ ಕಲ್ಪಿಸಿಕೊಡಬೇಕು ಎಂದರು.

ಇಂಗ್ಲೆಂಡ್​ನ ಡಾ. ದೇವಕಿ ಮಾತನಾಡಿ, ಮಹಿಳೆಯರು, ವಿಶೇಷವಾಗಿ ಮುಟ್ಟು ನಿಂತವರು ನಿಯಮಿತವಾಗಿ ಹೃದಯದ ಆರೋಗ್ಯ ತಪಾಸಣೆ, ಕೊಬ್ಬಿನ ಅಂಶ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಡಾ. ಎಸ್.ಎಸ್. ಅಯ್ಯಂಗಾರ್ ಮಾತನಾಡಿ, ಹಲವು ಭಾರತೀಯರಲ್ಲಿ ಎಲ್​ಪಿ (ಲಿಟಲ್ ಎ) ಅಂಶ ಅಧಿಕವಾಗಿದೆ. ಇದು ಹೃದಯಾಘಾತಕ್ಕೆ ಮುಖ್ಯ ಕಾರಣ. ಆದ್ದರಿಂದ ಲಿಪಿಡ್ ಪ್ರೊಫೈಲ್​ನಲ್ಲಿ ಈ ವಿಶೇಷ ಕೊಬ್ಬಿನ ಪರೀಕ್ಷೆ ಸೇರಿಸುವುದು ಅಗತ್ಯ ಎಂದು ಹೇಳಿದರು. ಸಮ್ಮೇಳನದಲ್ಲಿದ್ದ 40 ತಜ್ಞ ವೈದ್ಯರು, ಭಾರತೀಯರಲ್ಲಿ ಶರೀರದ ಕೊಬ್ಬಿನ ಅಂಶ ಹೆಚ್ಚುತ್ತಿರುವುದೇ ಹೃದಯದ ಸಮಸ್ಯೆಗೆ ಮುಖ್ಯ ಕಾರಣ. ಆದ್ದರಿಂದ ಪ್ರತಿಯೊಬ್ಬರೂ ಕೊಬ್ಬು ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸರ್ವಾನುಮತದಿಂದ ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net