ನಾಡಪಡುಕೋಣೆಗೆ ದೋಣಿಯೇ ಆಧಾರ...!

Kudhru
Published on

ಕುದ್ರು ದ್ವೀಪ ವಾಸಿಗರ ಜೀವನ ಹೀನಾಯ

ನಿತ್ಯವೂ ಎದುರಿಸಬೇಕು ಅಪಾಯ

ಪ್ರಶಾಂತ ಭಾಗ್ವತ ಉಡುಪಿ

ಮಳೆಗಾಲವಿರಲಿ, ಬೇಸಿಗೆಯೇ ಇರಲಿ ವರ್ಷವಿಡೀ ಇಲ್ಲಿನ ಜನರಿಗೆ ದೋಣಿಯಲ್ಲಿನ ಪಯಣ ತಪ್ಪದು. ಸೌಪರ್ಣಿಕಾ ನದಿ ದ್ವೀಪದಲ್ಲಿ ನೆಲೆಸಿರುವ ಇಲ್ಲಿನ ಎಲ್ಲರಿಗೂ ಬದುಕಿನ ಬಂಡಿ ಸಾಗಿಸಲು ದಿನವೂ ಹಲವು ಬಾರಿ ಹುಟ್ಟು ಹಾಕಿ ದೋಣಿ ಮುನ್ನಡೆಸಲೇಬೇಕು.

ಬೈಂದೂರು ತಾಲೂಕಿನ ಮರವಂತೆ ಗ್ರಾಪಂ ಮತ್ತು ನಾಡ ಗ್ರಾಪಂ ಮಧ್ಯದಲ್ಲಿರುವ ನಾಡಪಡುಕೋಣೆ ಎಂದು ಕರೆಯಲ್ಪಡುವ ಕುದ್ರು ದ್ವೀಪ ನಿವಾಸಿಗರ ಕಥೆ-ವ್ಯಥೆಯಿದು.

ಜೀವನದ ಅನಿವಾರ್ಯ

ಕುದ್ರು ದ್ವೀಪದೊಳಗೆ ಸುಮಾರು ಹತ್ತು ಕುಟುಂಬಗಳಿವೆ. ಸಣ್ಣ ಸೂಜಿಯಿಂದ ಹಿಡಿದು ಜೀವನ ನಿರ್ವಹಣೆಗೆ ಏನೇ ಅಗತ್ಯ ವಸ್ತು ಬೇಕಾದರೂ ಮನೆಯಿಂದ ಹೊರ ಬಂದು ದೋಣಿಯಲ್ಲಿ ಸೌಪರ್ಣಿಕಾ ನದಿ ದಾಟಲೇಬೇಕು. ಇಲ್ಲಿನ ಮಕ್ಕಳಿಂದ ಹಿಡಿದು ಪುರುಷ-ಮಹಿಳೆ ಎನ್ನದೆ ಎಲ್ಲರೂ ಏಕಾಂಗಿಯಾಗಿ ದೋಣಿ ನಡೆಸಲೇಬೇಕು. ಇದು ಅಲ್ಲಿನ ಜನಜೀವನದ ಅನಿವಾರ್ಯತೆ. ದಿನಕ್ಕೆ ಹತ್ತಾರು ಬಾರಿ ಅತ್ತಂದಿತ್ತ ದೋಣಿ ಪಯಣ ಸಹಜ.

ಮನೆಗೊಂದು ದೋಣಿ

Kudhru 2
ಎಲ್ಲರ ಮನೆಯಲ್ಲೂ ಬೈಕು ಅಥವಾ ಕಾರು ಇರುವಂತೆ ಇಲ್ಲಿನ ಎಲ್ಲರ ಮನೆಯವರ ಬಳಿ ದೋಣಿ ಇದೆ. ಬೇಸಿಗೆಯಲ್ಲೂ ಸಹ ನದಿಯಲ್ಲಿ ಹರಿವು ಇರುವುದರಿಂದ ಮನೆ ಸೇರಲು ಅಥವಾ ಕೆಲಸಕ್ಕಾಗಿ ಹೊರ ಹೋಗಲು ದೋಣಿಯೇ ಆಧಾರ. ಮಕ್ಕಳ ಸಂಖ್ಯೆ ಕಡಿಮೆ ಆಗಿದ್ದರಿಂದ ಅಲ್ಲಿದ್ದ ಶಾಲೆಯನ್ನೂ ಮುಚ್ಚಲಾಗಿದೆ. ಹೀಗಾಗಿ ಮಕ್ಕಳೂ ದೋಣಿಯಲ್ಲಿ ಸಾಗಿ ಮರವಂತೆ, ಪಡುಕೋಣೆಯ ಶಾಲೆ-ಕಾಲೇಜಿಗೆ ತೆರಳಬೇಕಿದೆ. ಮಳೆಗಾಲದಲ್ಲಂತೂ ಮನೆಯ ಸುತ್ತ ನೀರು ಆವರಿಸಿಕೊಳ್ಳುವುದರಿಂದ ಪ್ರಾಣರಕ್ಷಣೆಗೂ ಸಹ ಅದೇ ದೊಣಿಯೇ ಆಸರೆಯಾಗುತ್ತದೆ.

ನೀರಿನಲ್ಲಿ ಮುಳುಗುವ ಬದುಕು!

Kudhru 3
ದ್ವೀಪವಾಸಿಗರ ಬದುಕು ಕಲ್ಪನೆಗೂ ನಿಲುಕದ್ದು. ನದಿಯ ನೀರಿನ ಸೆಳೆತದ ನಡುವೆ ಇಲ್ಲಿನ ಜ್ಯೋತಿ ಪೂಜಾರಿ ಎಂಬ ಮಹಿಳೆ ಒಂಟಿಯಾಗಿ ದೋಣಿ ಸಾಗಿಸುವ ರೀತಿ ಭೀತಿ ಹುಟ್ಟಿಸುತ್ತದೆ. ತನ್ನ ಮಕ್ಕಳನ್ನು ಶಾಲೆಗೆ ಬಿಡಲು, ಮರಳಿ ಕರೆತರಲು ಹಾಗೂ ನಿತ್ಯದ ದಿನಸಿ ಖರೀದಿಗೆ ದೋಣಿ ಸಾಗಿಸುತ್ತಾರೆ. ಇದು ಇಲ್ಲಿನ ಎಲ್ಲರ ನಿತ್ಯದ ಕರ್ಮ. ಇನ್ನು ಮಳೆಗಾಲ ಆರಂಭವಾಯಿತೆಂದರೆ ಮನೆಗಳೆಲ್ಲ ಮುಕ್ಕಾಲು ಭಾಗ ಮುಳುಗುತ್ತದೆ. ಹೀಗಾಗಿ ಮನೆಯ ಒಳಗಡೆ ಮೂರು ಹಂತದಲ್ಲಿ ವಿಭಿನ್ನ ವಿನ್ಯಾಸವನ್ನೂ ಮಾಡಿಕೊಂಡಿದ್ದಾರೆ. ಎರಡು ಹಂತವನ್ನು ಮೀರಿ ಮನೆಯೊಳಗೆ ನೀರು ತುಂಬಿದರೆ ಕೂಡಲೇ ದೋಣಿ ಮೂಲಕ ಮರವಂತೆಗೆ ಬಂದು ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಮಾಡುತ್ತಾರೆ.

ಬಂಟ್ವಾಡಿ ಡ್ಯಾಂನಿಂದಾಗಿ ಪ್ರವಾಹ

555
ಸೌಪರ್ಣಿಕಾ ನದಿಗೆ ಬಂಟ್ವಾಡಿ ಎಂಬಲ್ಲಿ ಡ್ಯಾಂ ನಿರ್ಮಿಸಿದ್ದರಿಂದ ಮಳೆಗಾಲದಲ್ಲಿ ಇಲ್ಲಿನ ಜನರ ಬದುಕು ಮತ್ತಷ್ಟು ದುಸ್ತರವಾಗುತ್ತದೆ. ತಿಂಗಳುಗಳ ಕಾಲ ಪ್ರವಾಹದಿಂದ ಮನೆಗಳು ಮುಳುಗಡೆ ಆಗುತ್ತವೆ. ವಿಪರೀತ ಮಳೆ ಸುರಿದು ನಿಂತರೂ ಸಹ ಡ್ಯಾಂನಲ್ಲಿ ಗೇಟ್​ ಹಾಕುವುದರಿಂದ ಪ್ರವಾಹ ಇಳಿಯಲು ವಾರಗಳ ಕಾಲ ಕಾಯಬೇಕು. ದಶಕದಿಂದ ಈಚೆಗಂತೂ ಮಳೆಗಾಲದಲ್ಲಿ ಇಲ್ಲಿನ ಜನರಿಗೆ ನೆರೆ ತಪ್ಪಿಲ್ಲ. ಕಳೆದ ವಾರ ಬೈಂದೂರು ತಾಲೂಕಿನಲ್ಲಿ ಭಾರಿ ಮಳೆಯಾಗಿದ್ದರಿಂದ ಇಲ್ಲಿನ ಬಹುತೇಕರ ಮನೆ ಮುಳುಗಡೆಯಾಗಿದೆ.

ದ್ವೀಪದಲ್ಲಿರುವ ನಮ್ಮ ಮನೆಗಳಿಗೆ ಹೋಗಲು ಕಿರುಸೇತುವೆ ಮಾಡಿಕೊಡುವಂತೆ ನಾಡ ಗ್ರಾಪಂಗೆ ಹಾಗೂ ಶಾಸಕರಿಗೂ ಮನವಿ ಕೊಟ್ಟಿದ್ದೇವೆ. ಮಳೆಗಾಲದಲ್ಲಿ ಮನೆ ಮುಳುಗುವುದರಿಂದ ಅಲ್ಲೆಯೇ ಮೇಲ್ಭಾಗದಲ್ಲಿ ಜಾಗ ನೀಡುವಂತೆ ಕೇಳಿದ್ದು ಯಾರಿಂದಲೂ ಸ್ಪಂದನೆ ಇಲ್ಲ. ಮಳೆಗಾಲದಲ್ಲಿ ನದಿ ಅಬ್ಬರದಲ್ಲಿ ದೋಣಿ ಸಾಗಿಸಲು ತುಂಬ ಭಯ ಆಗುತ್ತದೆ. ನಮಗೆ ಸೇತುವೆ ಸೌಲಭ್ಯ ಬೇಕಿದೆ. | ಜ್ಯೋತಿ ಪೂಜಾರಿ. ನಾಡಪಡುಕೋಣೆ ದ್ವೀಪ ನಿವಾಸಿ ಕುದ್ರು ದ್ವೀಪ ವಾಸಿಗರ ಬದುಕು ಸಾಹಸ, ಅಪಾಯವೆಂಬಂತೆ ಕಾಣಬಹುದು. ಅವರಿಗದು ಅನಿವಾರ್ಯ. ಆದರೆ, ಅವರ ಬದುಕಿಗೆ ಬೇಕಿರುವ ಮೂಲ ಸೌಲಭ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಈಗ ಸರ್ಕಾರದಿಂದಲೂ ಯಾವುದೇ ಅನುದಾನವೂ ಬರುತ್ತಿಲ್ಲ. ಬೈಂದೂರು ತಾಲೂಕಿನಲ್ಲಿ ಸಿಎಸ್​ಆರ್​ ಫಂಡ್​ನಲ್ಲಿ 400ಕ್ಕೂ ಹೆಚ್ಚು ಕಾಲುಸಂಕ ನಿರ್ಮಿಸಲಾಗುತ್ತಿದ್ದರೂ ನದಿಗೆ ಕಿರು ಸೇತುವೆ ನಿರ್ಮಿಸಲು ಅಸಾಧ್ಯ. ಯಾವಾಗ ಎಂದು ಹೇಳದಿದ್ದರೂ ಅಲ್ಲಿನವರಿಗೆ ಕಿರು ಸೇತುವೆ ನಿರ್ಮಿಸಿಕೊಡಲು ಬದ್ಧನಿದ್ದೇನೆ. | ಗುರುರಾಜ ಗಂಟಿಹೊಳೆ. ಬೈಂದೂರು ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net