

ಶ್ರೀರಂಗಪಟ್ಟಣ: ವಿಶ್ವವಿಖ್ಯಾತ ರಂಗನತಿಟ್ಟು ಪಕ್ಷಿಧಾಮದ ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿರುವ ಹಿನ್ನೆಲೆಯಲ್ಲಿ ದೋಣಿ ವಿಹಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ತಾಲೂಕಿನ ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರಸ್ತುತ ಪ್ರವಾಸಿಗರ ಭೇಟಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಆದರೆ ನದಿಯಲ್ಲಿ 55 ಸಾವಿರ ಕ್ಯೂಸೆಕ್ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ಕಾರಣ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಧಾಮದ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ.
ಪಕ್ಷಿಧಾಮದ ನದಿಯಲ್ಲಿ 5 ಸಾವಿರ ಕ್ಯೂಸೆಕ್ ಪ್ರಮಾಣದಲ್ಲಿ ನೀರು ಹರಿದರೆ ಮಾತ್ರ ದೋಣಿ ವಿಹಾರಕ್ಕೆ ಅವಕಾಶ ಕಲ್ಪಿಸುವ ನಿಯಮವಿದ್ದು, ಪ್ರವಾಹ ತಗ್ಗುವವರೆಗೂ ಈ ಕ್ರಮ ಪಾಲನೆಯಾಗಲಿದೆ. ಒಂದು ವೇಳೆ ನೀರಿನ ಪ್ರಮಾಣ 60 ಸಾವಿರ ಕ್ಯೂಸೆಕ್‌ಗೆ ತಲುಪಿದರೆ ಜನರು ಮತ್ತು ಪ್ರವಾಸಿಗರ ಪ್ರವೇಶಕ್ಕೂ ಸಹ ನಿರ್ಬಂಧ ವಿಧಿಸಲಾಗುತ್ತದೆ.
ಪ್ರಸ್ತುತ ಧಾಮದ ದ್ವೀಪಗಳಲ್ಲಿ ಬ್ಲಾೃಕ್ ಹೆಡೆಡ್ ಐಬೀಸ್, ಈಗ್ರೇಟ್ಸ್, ಪಾಂಡ್‌ಹೆರಾನ್ಸ್, ನೈಟ್ ಹೇರಾನ್ಸ್‌ನಂತಹ ಸ್ಥಳಿಯ ಪಕ್ಷಿಗಳಿದ್ದು, ಎಲ್ಲ ದ್ವೀಪಗಳಲ್ಲಿದ್ದ ವಿದೇಶಿ ಹಕ್ಕಿಗಳು ಸಂತಾನೋತ್ವತ್ತಿ ಮುಗಿಸಿ ಇಲ್ಲಿಂದ ತೆರಳಿರುವ ಕಾರಣ ಯಾವುದೇ ಭೀತಿ ಇಲ್ಲ. ಮಾರ್ಷಲ್ ತಳಿಯ ಮೊಸಳೆಗಳು ಹಾಗೂ ನೀರುನಾಯಿ ಸೇರಿದಂತೆ ಸಾವಿರಾರು ಸಂಖ್ಯೆಯ ಕಾಡು ದನಗಳಿದ್ದು, ದ್ವೀಪದಲ್ಲಿನ ಸುರಕ್ಷಿತ ತಾಣಗಳಿಗೆ ಸೇರಲಿದೆ ಎಂದು ಅರಣ್ಯ ಇಲಾಖೆ ಮೈಸೂರು ವನ್ಯಜೀವಿ ವಿಭಾಗದ ಡಿಆರ್‌ಎಫ್‌ಒ ರವಿ ತಿಳಿಸಿದ್ದಾರೆ.