ಭೀಷ್ಮಕೆರೆಯಲ್ಲಿ ಬೋಟಿಂಗ್

14-gdg-8
Published on

ಗದಗ: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಎನಿಸಿರುವ ಭೀಷ್ಮ ಕೆರೆಯಲ್ಲಿ ಬೋಟಿಂಗ್ ಆರಂಭವಾಗಿದ್ದರಿಂದ ಅವಳಿ ನಗರದ ಜನರಿಗೆ ಹರ್ಷ ತಂದಿದೆ. ವಾರಾಂತ್ಯಕ್ಕೆ ಕುಟುಂಬ ಸಮೇತ ಸಮಯ ಕಳೆಯಲು ಜನರು ದೌಡಾಯಿಸುತ್ತಿದ್ದಾರೆ.

ಕರೊನಾ ಹಾವಳಿ ಹೆಚ್ಚಾಗಿದ್ದರಿಂದ ಕಳೆದ ಒಂದು ವರ್ಷದಿಂದ ಕೆರೆಯಲ್ಲಿನ ಬೋಟಿಂಗ್ ವ್ಯವಸ್ಥೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಕರೊನಾ ಸೋಂಕು ಕೊಂಚ ಕಡಿಮೆ ಆಗಿದ್ದರಿಂದ ಖಾಸಗಿಯವರಿಗೆ ಗುತ್ತಿಗೆ ನೀಡಿ ಬೋಟಿಂಗ್ ಆರಂಭಿಸಲಾಗಿದೆ.

ಕೆರೆಯಲ್ಲಿ ನೀರು ಕಡಿಮೆಯಾಗಿದ್ದರೂ ಬೋಟಿಂಗ್ ವಿಹಾರಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ. ಯುವಕರು ಹೆಚ್ಚು ಆಗಮಿಸುತ್ತಿದ್ದು. ಸಂಜೆಯ ತಂಗಾಳಿಗೆ ಮೈಯೊಡ್ಡಿ ವಿಹರಿಸಿ ಖುಷಿ ಪಡುತ್ತಿದ್ದಾರೆ. ಕೆಲವರು ತಾವೇ ಬೋಟಿಂಗ್ ಪೆಡಲ್ ತುಳಿಯುತ್ತಾ ಮಜಾ ಅನುಭವಿಸುತ್ತಾರೆ. ವಾರದ ದಿನಗಳಲ್ಲಿ ಜನರ ಸಂಖ್ಯೆ ಕಡಿಮೆ ಇರುತ್ತದೆ. ಆದರೆ, ವಾರಾಂತ್ಯಕ್ಕೆ ಬೋಟಿಂಗ್​ಗೆ ಸರದಿಯಲ್ಲಿ ನಿಲ್ಲಬೇಕು. ಜತೆಗೆ ಕೆರೆಯಲ್ಲಿನ ಬಸವೇಶ್ವರ ಮೂರ್ತಿ ಕೆಳಭಾಗದಲ್ಲಿ ಸ್ಥಾಪಿಸಿರುವ 12ನೇ ಶತಮಾನದ ಶರಣರ ಮಾಹಿತಿವುಳ್ಳ ಕಲಾಕೃತಿಯ ವಸ್ತು ಸಂಗ್ರಹಾಲಯ ಸಾರ್ವಜನಿಕರಿಗೆ ಮುಕ್ತವಾಗಿದೆ. ಪಾದದಿಂದ 111 ಅಡಿ, ಪ್ರದಕ್ಷಿಣೆ ಪಥದಿಂದ 116 ಅಡಿ ಎತ್ತರದ ಬಸವೇಶ್ವರ ಮೂರ್ತಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಇಲ್ಲಿರುವ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದರೆ 12ನೇ ಶತಮಾನದ ಶರಣರ ಮಾಹಿತಿವುಳ್ಳ ಕಲಾಕೃತಿಗಳು ಕಣ್ಣಿಗೆ ಮುದನೀಡುತ್ತವೆ. ಅಲ್ಲದೆ, ಬಸವೇಶ್ವರ ಮೂರ್ತಿ ವೀಕ್ಷಣೆಗೆ ಬರುವ ಜನರು ಅಲ್ಲಿನ ಉದ್ಯಾನದಲ್ಲಿ ಕುಳಿತು ಕೆಲ ಹೊತ್ತು ಹರಟೆ ಹೊಡೆದು ಮನೆಗೆ ತೆರಳುತ್ತಾರೆ.

ಗದಗ ಭೀಷ್ಮಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಆರಂಭಿಸಿದ್ದು ಖುಷಿ ತಂದಿದೆ. ಕರೊನಾ ಭಯ ಇನ್ನೂ ಸಂಪೂರ್ಣವಾಗಿ ಹೋಗಿಲ್ಲ. ಹೀಗಾಗಿ ವಾರಾಂತ್ಯಕ್ಕೆ ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆ ಎದುರಾಗುತ್ತಿತ್ತು. ಇದೀಗ ಬೋಟಿಂಗ್ ಮೂಲಕ ಕೆಲ ಸಮಯ ಕಳೆದು ಒತ್ತಡ ನಿವಾರಿಸಿಕೊಳ್ಳಬಹುದು.| ಸಂಜೀವ ಪಾಟೀಲ, ಖಾಸಗಿ ಕಂಪನಿ ನೌಕರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net