ಕಡಲಬ್ಬರ ಇಳಿದರೆ ನಾಡದೋಣಿ ಮೀನುಗಾರಿಕೆ

gan (6)
Published on

ಕುಂದಾಪುರ: ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಕಡಲು ಪ್ರಕ್ಷುಬ್ಧಗೊಂಡಿದೆ. ಜೂನ್ ಕೊನೆಯಲ್ಲಿ ಅಥವಾ ಜುಲೈ ಮೊದಲ ವಾರದಲ್ಲಿ ಕುಂದಾಪುರ ಭಾಗದಲ್ಲಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಆರಂಭಗೊಳ್ಳುವ ನಿರೀಕ್ಷೆಯಿದೆ. ಒಂದೆರಡು ದಿನಗಳಿಂದ ಕಡಲು ಅಬ್ಬರಿಸುತ್ತಿದ್ದು, ಸಮುದ್ರದ ಪರಿಸ್ಥಿತಿ ನೋಡಿಕೊಂಡು ಕುಂದಾಪುರ, ಬೈಂದೂರು ಭಾಗದ ನಾಡದೋಣಿ ಮೀನುಗಾರರು ಕಡಲಿಗಿಳಿಯಬಹುದು. ಮಳೆಗಾಲದಲ್ಲಿ ಆಳ ಸಮುದ್ರ ಅಥವಾ ಯಾಂತ್ರೀಕೃತ ಮೀನುಗಾರಿಕೆಗೆ ಜು.31ರವರೆಗೆ ನಿರ್ಬಂಧ ಹೇರಲಾಗಿದ್ದು, ಮಳೆಗಾಲದಲ್ಲಿ ಮೀನುಗಾರರು ನೆಚ್ಚಿಕೊಂಡಿರುವ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ನಡೆಸಲಾಗುತ್ತದೆ. ಕುಂದಾಪುರ, ಬೈಂದೂರು ಭಾಗದ ಕೊರವಡಿ, ಬೀಜಾಡಿ, ಕೋಡಿ, ಗಂಗೊಳ್ಳಿ, ಬೆಣ್ಗೆರೆ, ಕಂಚುಗೋಡು, ಹೊಸಪೇಟೆ, ಮರವಂತೆ, ತ್ರಾಸಿ, ಕೊಡೇರಿ, ಉಪ್ಪುಂದದ ಮಡಿಕಲ್, ಅಳ್ವೆಗದ್ದೆಯಲ್ಲಿ ನಾಡದೋಣಿ ಮೀನುಗಾರರಿದ್ದಾರೆ. ಉಪ್ಪುಂದ ವ್ಯಾಪ್ತಿಯಲ್ಲಿ 1,500 ನಾಡದೋಣಿಗಳಿದ್ದರೆ, ಗಂಗೊಳ್ಳಿ ವ್ಯಾಪ್ತಿಯಲ್ಲಿ 300 ಸಿಂಗಲ್, 35ಕ್ಕೂ ಮಿಕ್ಕಿ ಜೋಡಿ ದೋಣಿಗಳು ಸೇರಿದಂತೆ ಸುಮಾರು 600ಕ್ಕೂ ಮಿಕ್ಕಿ ನಾಡದೋಣಿಗಳಿವೆ. ಮರವಂತೆಯಲ್ಲಿ 100 ಜೋಡಿ ದೋಣಿ, 150ಕ್ಕೂ ಮಿಕ್ಕಿ ಸಿಂಗಲ್ ದೋಣಿಗಳಿವೆ.

ತೂಫಾನ್ ಎದ್ದು ಕಡಲು ಪ್ರಕ್ಷುಬ್ಧ

ಕಡಲಾಳದಲ್ಲಿ ತೂಫಾನ್ ಎದ್ದ ಬಳಿಕ ಕಡಲು ಪ್ರಕ್ಷುಬ್ಧಗೊಳ್ಳುತ್ತದೆ. ಇದರಿಂದ ಪಶ್ಚಿಮ ಟ್ಟ ಭಾಗದಿಂದ ಹರಿದು ಬರುವ ನದಿ, ಹೊಳೆಗಳ ನೀರು, ಅದರೊಂದಿಗೆ ತ್ಯಾಜ್ಯವೆಲ್ಲ ಸಮುದ್ರಕ್ಕೆ ಬಂದು ಸೇರುವುದರಿಂದ ಆಹಾರಕ್ಕಾಗಿ ವಿವಿಧ ಜಾತಿಯ ಮೀನುಗಳು ಕಡಲ ತೀರದತ್ತ ಧಾವಿಸುತ್ತವೆ. ತೂಫಾನ್ ಏಳದೇ ಮೀನುಗಾರರು ಕಡಲಿಗಿಳಿದರೂ ಹೇರಳವಾಗಿ ಮೀನು ಸಿಗಲಾರದು. ತೂಫಾನ್ ಬಳಿಕ ಉತ್ತಮ ಪ್ರಮಾಣದಲ್ಲಿ ಮೀನು ಸಿಗುತ್ತದೆ ಎಂಬುದು ಮೀನುಗಾರರ ಅಭಿಪ್ರಾಯ. ಈಗ ಕಡಲು ಪ್ರಕ್ಷುಬ್ಧಗೊಂಡಿದ್ದು, ಕಡಲಿಗೆ ಇಳಿಯಲು ಸಾಧ್ಯವಿಲ್ಲ. ಸಮುದ್ರ ಶಾಂತಗೊಂಡ ಬಳಿಕ ಪರಿಸ್ಥಿತಿ ನೋಡಿಕೊಂಡು ಕಡಲಿಗೆ ಇಳಿಯುತ್ತೇವೆ. ಬಹುಶಃ ಜೂನ್ ಕೊನೆ ವಾರ ಅಥವಾ ಜುಲೈ ಮೊದಲ ವಾರದಲ್ಲಿ ಆರಂಭಗೊಳ್ಳಬಹುದು - ಸುರೇಶ ಖಾರ್ವಿ ಮರವಂತೆ, ನಾಡದೋಣಿ ಮೀನುಗಾರರ ಸಂಘದ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net