ಸಂತ್ರಸ್ತರಿಗೆ ಹೆಚ್ಚುವರಿ 4 ಲಕ್ಷ ರೂ. ಪರಿಹಾರಕ್ಕೆ ಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ

parihara new
Published on

ಮಂಗಳೂರು: ಮೀನುಗಾರಿಕಾ ದೋಣಿ ದುರಂತದ ಸಂತ್ರಸ್ತರಿಗೆ ನಿಯಮ ಪ್ರಕಾರ ತಲಾ 6 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಹೆಚ್ಚುವರಿಯಾಗಿ 4 ಲಕ್ಷ ರೂ. ನೀಡುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.

ದುರಂತದಲ್ಲಿ ಮೃತಪಟ್ಟ ಆರು ಮಂದಿಯ ಕುಟುಂಬಗಳಿಗೆ ಪರಿಹಾರ ಮೊತ್ತದ ಮಂಜೂರಾತಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ವಿತರಿಸಿದ ಅವರು, ಹೆಚ್ಚುವರಿ ಪರಿಹಾರಕ್ಕೆ ಮೀನುಗಾರ ಮುಖಂಡರು ಒತ್ತಾಯಿಸಿದ್ದಾರೆ. ವಾರದೊಳಗೆ ಸಂಸದರು ಹಾಗೂ ಶಾಸಕರ ನಿಯೋಗ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾಡಲಿದೆ. ಮೀನುಗಾರರು ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರ ಸದಾ ನಿಮ್ಮ ಬೆಂಬಲಕ್ಕಿದೆ ಎಂದರು.

ದುರ್ಘಟನೆಯಲ್ಲಿ 6 ಮೀನುಗಾರರು ಮೃತಪಟ್ಟಿರುವುದು ತೀವ್ರ ನೋವನ್ನುಂಟು ಮಾಡಿದೆ. ಶೋಧ ಕಾರ್ಯ ಹಾಗೂ ಪರಿಹಾರ ವಿಚಾರದಲ್ಲಿ ಸರ್ಕಾರ ತಕ್ಷಣ ಸ್ಪಂದಿಸಿದೆ. ಮೀನುಗಾರರ ಸಮಸ್ಯೆ, ಸವಾಲುಗಳ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು. ಜತೆಗೆ, ಮೀನುಗಾರಿಕೆಗೆ ತೆರಳುವ ಕಾರ್ಮಿಕರು ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಲ್ೈ ಜಾಕೆಟ್ ಬಳಕೆ ಸೇರಿದಂತೆ ವಿವಿಧ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಬಗ್ಗೆ ಶೀಘ್ರದಲ್ಲಿ ಮೀನುಗಾರ ಮುಖಂಡರು ಹಾಗೂ ಇಲಾಖೆ ಜತೆಗೆ ಸಭೆ ನಡೆಸಲಾಗುವುದು. ದುರಂತದ ಸುದ್ದಿ ತಿಳಿಯುತ್ತಿದ್ದಂತೆ ರಕ್ಷಣಾ ಕಾರ್ಯಾಚರಣೆಯಲ್ಲಿ ಮೀನುಗಾರರ ಸಹಾಯ ಹಾಗೂ ಮುಳುಗು ತಜ್ಞರ ಕಾರ್ಯಾಚರಣೆಗೆ ಸರ್ಕಾರ ಅಭಾರಿಯಾಗಿದೆ ಎಂದು ಸಚಿವರು ತಿಳಿಸಿದರು.

ಮೀನುಗಾರಿಕೆಗೆ ತೆರಳುವ ಮೀನುಗಾರ ಬಂಧುಗಳು ಮುಂದಿನ ದಿನಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ವಿವಿಧ ನಿಯಮಾವಳಿ ರೂಪಿಸಲಾಗುವುದು. ಕಾರ್ಮಿಕರಿಗೆ ಲ್ೈ ಜಾಕೆಟ್, ಬೋಟ್‌ನ ಪರವಾನಗಿ ಸಂಬಂಧಿತ ವಿಚಾರ, ಕಾರ್ಮಿಕರಿಗೆ ಇನ್ಸುರೆನ್ಸ್ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿ ಕೆಲವೇ ದಿನದಲ್ಲಿ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು.

ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಡಿ.ವೇದವ್ಯಾಸ್ ಕಾಮತ್, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಪಾರ್ಶ್ವನಾಥ್ ಉಪಸ್ಥಿತರಿದ್ದರು.

ಸಮಗ್ರ ತನಿಖೆ: ದೋಣಿ ದುರಂತಕ್ಕೆ ಕಾರಣವೇನು ಹಾಗೂ ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿದುಕೊಳ್ಳುವ ಹಿನ್ನೆಲೆಯಲ್ಲಿ ಮೀನುಗಾರಿಕಾ ಇಲಾಖೆ ವತಿಯಿಂದ ಸಮಗ್ರ ತನಿಖೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net