

ಪ್ರಕಾಶ್ ಮಂಜೇಶ್ವರ ಮಂಗಳೂರು
ಶತಕದತ್ತ ದಾಪುಗಾಲಿಡುತ್ತಿರುವ ಡೀಸೆಲ್ ದರ, ಕೈಗೆ ಸಿಗದ ಸರ್ಕಾರದ ಡೀಸೆಲ್ ಸಹಾಯಧನ, ಹವಾಮಾನ ವೈಪರೀತ್ಯ, ಮತ್ಸ್ಯಕ್ಷಾಮ, ನೆಲ ಕಚ್ಚಿದ ರಫ್ತು ಮಾರುಕಟ್ಟೆ, ನಿರಂತರ ಕಾಡಿದ ಮಾರುಕಟ್ಟೆ ನಿರ್ಬಂಧ ಸಹಿತ ವಿವಿಧ ಸಂಕಟ, ಭವಿಷ್ಯದ ಅನಿಶ್ಚಿತತೆ ನಡುವೆ ವರ್ಷದ ಮೀನುಗಾರಿಕೆ ಈ ಮಾಸಾಂತ್ಯಕ್ಕೆ ಕೊನೆಗೊಳ್ಳಲಿದೆ.
ಆಗಸ್ಟ್‌ನಲ್ಲಿ ಆರಂಭವಾಗುವ ಆಳಸಮುದ್ರ ಮೀನುಗಾರಿಕೆ ಮೇ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳುತ್ತದೆ. ಸರ್ಕಾರದ ಆದೇಶದ ಪ್ರಕಾರ ಜೂನ್ 1ರಿಂದ ಜುಲೈ 31ರವರೆಗೆ ಅಂದರೆ 61 ದಿನಗಳವರೆಗೆ ಮೀನುಗಾರಿಕೆಗೆ ನಿಷೇಧ. ಈ ಬಾರಿ ನಿರಂತರ ನಷ್ಟ ಸಂಭವಿಸಿದ ಕಾರಣ ಮೀನುಗಾರಿಕೆಯನ್ನು ಕನಿಷ್ಠ 10 ದಿನ ವಿಸ್ತರಿಸುವಂತೆ ಕರಾವಳಿಯ, ಮುಖ್ಯವಾಗಿ ಉಡುಪಿಯ ಮೀನುಗಾರರ ಬೇಡಿಕೆಯನ್ನು ಕೇಂದ್ರ ಸರ್ಕಾರ ಒಪ್ಪಿಲ್ಲ.
ಕರೊನಾ ಲಾಕ್‌ಡೌನ್‌ನಿಂದಾಗಿ ಒಂದು ತಿಂಗಳಿನಿಂದ ಸರಿಯಾಗಿ ಮೀನುಗಾರಿಕೆ ನಡೆದಿಲ್ಲ. ನಾಲ್ಕೈದು ತಿಂಗಳಿನಲ್ಲಿ ನಿರೀಕ್ಷೆಯಷ್ಟು ಮೀನುಗಾರಿಕೆ ನಡೆಯದಿರುವುದರಿಂದ ಬಹುತೇಕ ಬೋಟುಗಳು ಲಂಗರು ಹಾಕಿದ್ದವು. ಚಂಡಮಾರುತದ ಪ್ರಭಾವದಿಂದ ಕಡಲು ಕದಡಿರುವುದರಿಂದ ಮೀನುಗಾರಿಕಾ ಋತುವಿನ ಕೊನೆಯ ತಿಂಗಳಿನಲ್ಲಾದರೂ ಆಶಾದಾಯಕ ಮೀನುಗಾರಿಕೆ ನಡೆಯಬಹುದೆಂಬ ಆಸೆ ಈಡೇರುವ ಲಕ್ಷಣ ಗೋಚರಿಸದಿರುವುದರಿಂದ ಮೀನುಗಾರರು ಉಪಾಯವಿಲ್ಲದೆ ಬೋಟುಗಳನ್ನು ದಡ ಸೇರಿಸುತ್ತಿದ್ದು, ಸಂರಕ್ಷಿಸಿಡಲು ಸೂಕ್ತ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ. ಮೀನುಗಾರಿಕಾ ಬಲೆ ಮುಂತಾದ ಬೆಲೆ ಬಾಳುವ ಸಾಮಗ್ರಿ ಸುರಕ್ಷಿತ ತಾಣಕ್ಕೆ ಒಯ್ಯಲಾಗುತ್ತಿದೆ.
ಮಂಗಳೂರಿನಿಂದ ಮೀನುಗಾರಿಕೆಗೆ ತೆರಳುವ ಆಳಸಮುದ್ರ ಮೀನುಗಾರಿಕೆಯ ಶೇ.90 ಬೋಟುಗಳು ಈಗಾಗಲೇ ದಡ ಸೇರಿವೆ. ಈ ಬೋಟುಗಳಲ್ಲಿ ಶೇ.90ರಷ್ಟು ಕಾರ್ಮಿಕರು ತಮಿಳುನಾಡು, ಆಂಧ್ರಪ್ರದೇಶದವರಾಗಿದ್ದು, ಅವರನ್ನು ಊರಿಗೆ ಕಳುಹಿಸಲಾಗಿದೆ.
ಮಲ್ಪೆಯಿಂದ ಮೇ 19ರ ಬಳಿಕ ಕೆಲವು ಬೋಟ್‌ಗಳು ಮೀನುಗಾರಿಕೆಗೆ ತೆರಳಿದ್ದು, ಡೀಸೆಲ್‌ಗೆ ಹಾಕಿದ ಹಣವೂ ಬಂದಿಲ್ಲ. ಮೂರ್ನಾಲ್ಕು ತಿಂಗಳಿನಿಂದ ಶೇ.70ರಷ್ಟು ಬೋಟುಗಳು ಬಂದರಿನಲ್ಲೇ ಇದ್ದವು. ಲಾಕ್‌ಡೌನ್ ಪರಿಣಾಮ ಏಲಂ, ಚಿಲ್ಲರೆ ಮೀನು ಮಾರಾಟ ನಿಲ್ಲಿಸಲಾಗಿತ್ತು. ಈ ಸಮಯದಲ್ಲಿ ಮೀನುಗಾರಿಗೆ ವಹಿವಾಟು ಸಂಪೂರ್ಣ ಕುಸಿತವಾಗಿದೆ. ಪ್ರಸಕ್ತ ಬಹುತೇಕ ಬೋಟುಗಳು ಲಂಗರು ಹಾಕಿವೆ.
ಇಳುವರಿ ಕುಸಿತ: ಕರೊನಾ ಅವಧಿಯಲ್ಲಿ ಮೀನು ಇಳುವರಿ ಕುಸಿತವಾಗಿತ್ತು. ದಕ್ಷಿಣ ಕನ್ನಡದಲ್ಲಿ 2020-21ನೇ ಸಾಲಿನಲ್ಲಿ 1,92,450 ಲಕ್ಷ ರೂ. ಮೌಲ್ಯದ 1,39,714 ಟನ್ ಮೀನು ಲಭ್ಯವಾಗಿದೆ. 2019-20ನೇ ಸಾಲಿನಲ್ಲಿ 2,03,138 ಲಕ್ಷ ರೂ. ಮೌಲ್ಯದ 1,79,944 ಟನ್ ಲಭ್ಯವಾಗಿತ್ತು. ಉಡುಪಿಯಲ್ಲಿ 2020-21ನೇ ಸಾಲಿನಲ್ಲಿ 1,10,958 ಲಕ್ಷ ರೂ. ಮೌಲ್ಯದ 1,04,453 ಟನ್ ಮೀನು ಉತ್ಪಾದನೆಯಾಗಿದೆ. 2019-20ನೇ ಸಾಲಿನಲ್ಲಿ 1,19,703 ಲಕ್ಷ ರೂ. ಮೌಲ್ಯದ 1,21,479 ಟನ್ ಮೀನು ಲಭ್ಯವಾಗಿತ್ತು.
ಕಂಗೆಡಿಸಿದ ಡೀಸೆಲ್ ದರ: ಕರೊನಾ ಪರಿಸ್ಥಿತಿ ಜತೆಗೆ ನಾಗಾಲೋಟದಲ್ಲಿ ಏರುಗತಿಯಲ್ಲಿ ಓಡುತ್ತಿರುವ ಇಂಧನ ದರ ಆಳ ಸಮುದ್ರ ಮೀನುಗಾರಿಕೆ ನಡೆಸುವ ಬೋಟ್ ಮಾಲೀಕರಲ್ಲಿ ಮೀನುಗಾರಿಕೆ ನಡೆಸುವ ಉತ್ಸಾಹವನ್ನೇ ಬತ್ತುವಂತೆ ಮಾಡಿದೆ.
ಲೀಟರ್‌ಗೆ 88 ರೂ. ಆಸುಪಾಸಿನಲ್ಲಿ ಡೀಸೆಲ್ ದರವಿದ್ದು, ಇದರಲ್ಲಿ 14 ರೂ. ತನಕ ಸರ್ಕಾರದ ಸಬ್ಸಿಡಿ ದೊರೆತರೂ, ಮೀನುಗಾರಿಕೆಯಲ್ಲಿ ಲಾಭ ಸಾಧ್ಯವಿಲ್ಲ ಎನ್ನುವುದು ಬೋಟ್ ಮಾಲೀಕರ ಸಾರ್ವತ್ರಿಕ ಅಳಲು. ಈ ಒಂದೇ ಕಾರಣದಿಂದ ಅನೇಕ ಮೀನುಗಾರರು ಬೋಟ್ ಕಡಲಿಗೆ ಇಳಿಸಿಲ್ಲ. ಲೀಟರ್‌ಗೆ 65 ರೂ. ಒಳಗೆ ದರ ಇದ್ದರೆ ಮಾತ್ರ ಲಾಭ ಸಾಧ್ಯ ಎನ್ನುತ್ತಾರೆ ಮಂಗಳೂರಿನ ಮೀನುಗಾರ ಮುಖಂಡರು. ಅಲ್ಲದೆ, ಮಾಸಿಕ ಒಂದು ಬೋಟಿಗೆ 9 ಸಾವಿರ ಲೀಟರ್ ಡೀಸೆಲ್ಗೆ ಮಾತ್ರ ಸಬ್ಸಿಡಿ ದೊರೆಯುತ್ತಿದೆ. ಆದರೆ ಸಾಮಾನ್ಯವಾಗಿ ಒಂದು ಬೋಟ್‌ಗೆ ಮಾಸಿಕ 15 ಸಾವಿರ ಲೀಟರ್ ತನಕ ಡೀಸೆಲ್ ಆವಶ್ಯಕತೆ ಇರುತ್ತದೆ.
ಪ್ರಸಕ್ತ ಪರಿಸ್ಥಿತಿಯಲ್ಲಿ ಮೀನುಗಾರಿಕೆ ಕಷ್ಟದಲ್ಲಿದೆ. ಮೀನುಗಾರಿಕೆ ಸಂಬಂಧಿಸಿ ದೊರೆಯಬೇಕಿದ್ದ ಸರ್ಕಾರದ ಎರಡು ತಿಂಗಳ ಸಬ್ಸಿಡಿ ಹಣ ಇಲಾಖೆ ಖಾತೆಗೆ ಜಮಾ ಆಗಿದ್ದು, ತಾಂತ್ರಿಕ ಕಾರಣಗಳಿಂದ ಸ್ವಲ್ಪ ವಿಳಂಬವಾಗಿದೆ. ಶೀಘ್ರದಲ್ಲೇ ಬೋಟ್ ಮಾಲೀಕರ ಖಾತೆಗೆ ವರ್ಗಾವಣೆ ಆಗಲಿದೆ.- ನಿತಿನ್ ಕುಮಾರ್, ಮೀನುಗಾರ ಮುಖಂಡ, ಮಂಗಳೂರು ಈ ವರ್ಷ ಸರಣಿ ಸಂಕಷ್ಟದಲ್ಲೇ ಮೀನುಗಾರಿಕೆ ಋತು ಅಂತ್ಯಗೊಂಡಿದೆ. ಸರ್ಕಾರ ಮೀನುಗಾರರನ್ನು ಕಡೆಗಣಿಸುತ್ತಿದೆ. ಲಾಕ್‌ಡೌನ್, ತೌಕ್ತೆ ಚಂಡಮಾರುತ ಪ್ಯಾಕೇಜ್ ಘೋಷಣೆಯಲ್ಲಿ ನಮ್ಮನ್ನು ಪರಿಗಣಿಸಿಲ್ಲ. ಬಾಕಿ ಇರುವ ಕರ ಸಹಿತ ಸಬ್ಸಿಡಿ ಹಣ ಬಿಡುಗಡೆ ಮಾಡಬೇಕು.-ಕೃಷ್ಣ ಎಸ್. ಸುವರ್ಣ, ಅಧ್ಯಕ್ಷ, ಮಲ್ಪೆ ಮೀನುಗಾರರ ಸಂಘ ಈ ಬಾರಿ ಆರಂಭದಲ್ಲಿ ಉತ್ತಮ ಮೀನುಗಾರಿಕೆ ನಡೆದಿದ್ದು, ಕೊನೆಯ ನಾಲ್ಕೈದು ತಿಂಗಳು ಮೀನುಗಾರಿಕೆ ಬಹುತೇಕ ಸ್ಥಗಿತಗೊಂಡಿದೆ. ಅಲ್ಲದೆ ಮೀನಿಗೆ ಸರಿಯಾದ ದರ ದೊರೆತಿಲ್ಲ. ಮೀನುಗಾರರು ಕೋಟ್ಯಾಂತರ ರೂ. ನಷ್ಟ ಅನುಭವಿಸಿದ್ದು, ಮೀನುಗಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.- ರಾಮಪ್ಪ ಖಾರ್ವಿ, ಮೀನುಗಾರ ಮುಖಂಡ, ಗಂಗೊಳ್ಳಿ