

ಮಡಿಕೇರಿ: ಸತ್ಯ ನಿಷ್ಟೂರ ವರದಿಗಾರಿಕೆಯ ಮೂಲಕ, ಸಮಾಜದ ಯಾವುದೇ ವಿಷಯಗಳನ್ನು ತಮ್ಮದೇ ಆದ ಹೊಸ ಆಯಾಮದಿಂದ ನೋಡುವ ಪರಿಕಲ್ಪನೆಯನ್ನು ಮೂಡಿಸಿದ ಕೊಡಗು ಸಮಾಚಾರ ಪತ್ರಿಕೆಯ ಸಂಪಾದಕರಾಗಿದ್ದ ದಿವಂಗತ ಮನು ಶೆಣೈರವರ ನೆನಪುಗಳನ್ನು ಚಿರಸ್ಥಾಯಿಯಾಗಿ ಉಳಿಸಿಕೊಳ್ಳುವ ಪ್ರಯತ್ನಗಳು ನಡೆಯಬೇಕೆನ್ನುವ ಆಶಯವನ್ನು ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ.ರಮೇಶ್ ವ್ಯಕ್ತಪಡಿಸಿದರು.
ಕೊಡಗು ಪತ್ರಿಕಾ ಭವನ ಟ್ರಸ್ಟ್, ಕೊಡಗು ಪತ್ರಕರ್ತರ ಸಂಘ ಮತ್ತು ಕೊಡಗು ಸಮಾಚಾರ ಅಭಿಮಾನಿ ಬಳಗ ವತಿಯಿಂದ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ಸೋಮವಾರ ಆಯೋಜಿತ ದಿ.ಬಿ.ಎನ್.ಮನು ಶೆಣೈ ನೆನಪು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಮೌನಾಚರಣೆ ಮತ್ತು ಮನು ಶೆಣೈರವರ ಭಾವ ಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಲಾಯಿತು.
ಈ ಸಂದರ್ಭ ಮಾತನಾಡಿದ ಅವರು, ವರ್ಷದ ಹಿಂದೆಯಷ್ಟೆ ನಮ್ಮನ್ನು ಅಗಲಿದ ಮನು ಶೆಣೈ ಅವರು ಪತ್ರಿಕಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿಕೊಳ್ಳುವ ಕಾರ್ಯ ಅಗತ್ಯವಾಗಿ ನಡೆಯಬೇಕಾಗಿದೆ. ಸುದೀರ್ಘ ಇಪ್ಪತ್ತಾರು ವರ್ಷ ಕೊಡಗು ಸಮಾಚಾರ ವಾರ ಪತ್ರಿಕೆಯನ್ನು ಅತ್ಯಂತ ಶ್ರದ್ಧೆಯಿಂದ ಮನು ಶೆಣೈ ಅವರು ಹೊರ ತಂದಿದ್ದಾರೆ. ಅವರು ತಮ್ಮ ಪತ್ರಿಕಾ ವೃತ್ತಿ ಧರ್ಮವನ್ನು ಅತ್ಯಂತ ಗಟ್ಟಿಯಾಗಿ ಪ್ರತಿಪಾದಿಸಿಕೊಂಡು ಬಂದವರಾಗಿದ್ದು, ಭ್ರಷ್ಟ ಅಧಿಕಾರಿಗಳು, ಕೆಟ್ಟ ಆಡಳಿತಗಾರರಿಗೆ ಅವರ ಬರಹ ದುಸ್ವಪ್ನವಾಗಿತ್ತು. ಅವರ ಲೇಖನಿಯಿಂದ ಮೂಡಿದ ಕಸ್ತೂರಿ ರಂಗನ್ ವರದಿಯ ಸಾಧ್ಯಾಸಾಧ್ಯತೆಗಳು, ಕಾಡಾನೆ-ಮಾನವ ಸಂಘರ್ಷ ಸೇರಿದಂತೆ ಹಲ ವರದಿಗಳು ನಿರ್ಭೀತಿಯಿಂದ ಕೂಡಿತ್ತೆಂದು ಹೇಳಿದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್ ಮಾತನಾಡಿ, ತಾವು ನಂಬಿದ ಸಿದ್ಧಾಂತಕ್ಕೆ ಬದ್ಧವಾಗಿ ಮನು ಶೆಣೈ ಅವರು ಯಾವುದೇ ಟೀಕೆಗಳಿಗೆ ಜಗ್ಗದೆ ನಿಷ್ಟೂರವಾಗಿ, ನಿರ್ಭೀತಿಯಿಂದ ಪತ್ರಿಕೆಯನ್ನು ನಡೆಸಿದ ಚೇತನ. ಅವರ ಚಿಂತನೆಗಳು, ಆದರ್ಶಗಳು ಯುವ ಪೀಳಿಗೆಗೆ ಅತ್ಯವಶ್ಯಕ. ಈ ಹಿನ್ನೆಲೆ ಕೊಡಗು ಪತ್ರಕರ್ತರ ಸಂಘದಿಂದ ಬಿ.ಎನ್. ಮನುಶೆಣೈ ಅವರ ಹೆಸರಿನ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದರು.
ಕೊಡಗು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತರಾದ ಕೆ.ಟಿ. ಬೇಬಿ ಮ್ಯಾಥ್ಯು, ಅವರ ಒಡನಾಟವನ್ನು ಮೆಲುಕು ಹಾಕಿ, ಅವರ ನೆನಪು ನಮ್ಮೆಲ್ಲರ ಮನಸಿನಲ್ಲಿ ಸದಾಹಸಿರಾಗಿದೆಯೆಂದು ತಿಳಿಸಿದರು.
ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ಟ್ರಸ್ಟಿ ಎಚ್.ಟಿ.ಅನಿಲ್ ಮಾತನಾಡಿ, ಅಲೆಯ ವಿರುದ್ಧವಾಗಿ ಈಜು ಸುಲಭ ಸಾಧ್ಯವಲ್ಲ. ಹಲ ವಿಚಾರಗಳಲ್ಲಿ ತಮ್ಮ ಪತ್ರಿಕಾ ಕ್ಷೆತ್ರದ ನಿಲುವಿಗೆ ಅನುಗುಣವಾಗಿ ಮನು ಶೆಣೈ ಅವರು ಅಲೆಯ ವಿರುದ್ಧವಾಗಿ ಪತ್ರಿಕೆಯನ್ನು ಹೊರ ತರುವ ಮೂಲಕ ರಾಜಿ ಇಲ್ಲದೆ ಪತ್ರಿಕೋದ್ಯಮ ಮಾಡಿದವರು. ಅವರು ಪ್ರತಿಯೊಂದು ವಿಚಾರವನ್ನು ದಾಖಲೆಗಳ ಸಹಿತ ಮುಂದಿಡುತ್ತಿದ್ದ ಪತ್ರಕರ್ತ. ಇಂತಹ ಮನು ಶೆಣೈ ಅವರ ಹೆಸರನ್ನು ಚಿರಸ್ಥಾಯಿಯಾಗಿಸುವ ಯೋಜನೆ ರೂಪಿಸಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ.ಕೇಶವ ಕಾಮತ್ ವಹಿಸಿದ್ದರು. ಹಿರಿಯ ಪತ್ರಕರ್ತ ಶ್ರೀಧರ ನೆಲ್ಲಿತ್ತಾಯ, ಸಮಾಜ ಸೇವಕ ವಿ.ಪಿ.ಶಶಿಧರ್, ವಕೀಲ ಕೆ.ಆರ್.ವಿದ್ಯಾಧರ್, ವಿರಾಜಪೇಟೆ ತಾಲೂಕು ಕಸಾಪ ಅಧ್ಯಕ್ಷ ರಾಜೇಶ್ ಪದ್ಮನಾಭ, ನಿವೃತ್ತ ಶಿಕ್ಷಕ ಅಬ್ದುಲ್ ಲತೀಫ್, ದಿ.ಮನುಶೆಣೈ ಅವರ ಪುತ್ರ ಕಾರ್ತಿಕ್ ಶೆಣೈ ಮತ್ತು ಮಗಳು ನಮಿತಾ ಶೆಣೈರವರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು.