

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಂಚಾರ ಜೀವನಾಡಿ ಆಗಿರುವ ಬಿಎಂಟಿಸಿ, ಮಹಾನಗರದೆಲ್ಲೆಡೆ ಇರುವ ತನ್ನ ಸ್ವತ್ತುಗಳಿಗೆ ಆಸ್ತಿತೆರಿಗೆ ವಿನಾಯಿತಿ ಕೋರಿದ್ದ ಪ್ರಸ್ತಾಪಕ್ಕೆ ಬಿಬಿಎಂಪಿ ತಣ್ಣೀರು ಎರಚಿದೆ.
ಸರ್ಕಾರದ ಶಕ್ತಿ ಯೋಜನೆಯಿಂದ ಲಾಭದ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಬಿಎಂಟಿಸಿ ತನ್ನ ನಷ್ಟವನ್ನು ಸರಿದೂಗಿಸಿಕೊಳ್ಳಲು ಸಂಸ್ಥೆಯ ವಿವಿಧ ಸ್ವತ್ತುಗಳಿಗೆ ಪಾವತಿಸಲಾಗುತ್ತಿರುವ ಆಸ್ತಿತೆರಿಗೆಯಿಂದ ವಿನಾಯಿತಿ ನೀಡುವಂತೆ ನಗರಾಭಿವೃಧ್ಧಿ ಇಲಾಖೆಗೆ ಮನವಿ ಮಾಡಿತ್ತು. ಒಂದೂವರೆ ವರ್ಷದ ಹಿಂದೆ ಸಲ್ಲಿಸಿದ್ದ ಪ್ರಸ್ತಾಪಕ್ಕೆ ನಗರಾಭಿವೃದ್ಧಿ ಇಲಾಖೆ ಹಾಗೂ ಬಿಬಿಎಂಪಿ ಚರ್ಚೆ ನಡೆಸಿ ತನ್ನ ತೀರ್ಮಾನವನ್ನು ಪ್ರಕಟಿಸಿದೆ. ವಿನಾಯಿತಿ ನೀಡಿದರೆ ಸರ್ಕಾರದ ವಿವಿಧ ಸಾರ್ವಜನಿಕ ಸಂಸ್ಥೆಗಳಿಗೆ 1,000 ಕೋಟಿ ರೂ. ಆದಾಯ ಕೈಬಿಡುತ್ತದೆ ಎಂಬ ಕಾರಣ ನೀಡಿ ಬಿಎಂಟಿಸಿ ಪ್ರಸ್ತಾಪವನ್ನು ತಿರಸ್ಕರಿಸಲಾಗಿದೆ.
ವಿಶೇಷವೆಂದರೆ, ಬಿಎಂಟಿಸಿ ಸೇವೆ ಆರಂಭಿಸಿದ ನಾಲ್ಕು ದಶಕಗಳ ಬಳಿಕ ಅಸ್ತಿತ್ವಕ್ಕೆ ಬಂದಿರುವ ನಮ್ಮ ಮೆಟ್ರೋಗೆ (ಬಿಎಂಆರ್‌ಸಿಎಲ್) ಆಸ್ತಿತೆರಿಗೆ ವಿನಾಯಿತಿ ನೀಡಿ ಅದರ ಬದಲು ಸೇವಾ ಶುಲ್ಕ ಪಾವತಿಸಲು ಅವಕಾಶ ನೀಡುವಂತೆ ಬೇಡಿಕೆ ಇಟ್ಟಿತ್ತು. 2020ರಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಉನ್ನತ ಮಟ್ಟದ ಸಭೆಯಲ್ಲಿ ಬಿಎಂಆರ್‌ಸಿಎಲ್‌ಗೆ ವಿನಾಯಿತಿ ನೀಡುವ ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ಇದಾಗಿ ನಾಲ್ಕು ವರ್ಷದ ಬಳಿಕ ಇದೇ ಮಾದರಿಯಲ್ಲಿ ಬಿಎಂಟಿಸಿ ಸಲ್ಲಿಸಿದ್ದ ಪ್ರಸ್ತಾಪವನ್ನು ಪರಿಗಣಿಸದಿರುವುದು ಅಚ್ಚರಿ ಮೂಡಿಸಿದೆ.
ಯುಡಿಡಿಯಿಂದ ದ್ವಂದ್ವ ನಿಲುವು?:
ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ 1976ರ ಕಲಂ 110 ಜೆ ಅಡಿಯಲ್ಲಿ ವಸತಿ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಬಳಸದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಮೀನು ಹಾಗೂ ಕಟ್ಟಡಗಳು ಸೇರಿ ನಗರಾಭಿವೃದ್ಧಿ ಪ್ರಾಧಿಕಾರಗಳು, ಬಿಡಿಎ, ಕೆಎಚ್‌ಬಿ, ಜಲಮಂಡಳಿಗೆ ಆಸ್ತಿತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಸೇವಾ ಶುಲ್ಕ ವಸೂಲು ಮಾಡಿ ಅವಕಾಶ ಇದೆ. ಈ ನಿಯಮ ಸ್ಥಳೀಯ ಪ್ರಾಧಿಕಾರಗಳ ಅಡಿಯಲ್ಲಿನ ಶಿಕ್ಷಣ ಸಂಸ್ಥೆಗಳಿಗೂ ಅನ್ವಯಿಸುತ್ತದೆ. ಆದರೆ, ಬಿಡಿಎ ಹಾಗೂ ಕೆಎಚ್‌ಬಿ ಸಾರ್ವಜನಿಕ ಸಂಸ್ಥೆಗಳಾಗಿದ್ದರೂ, ಸೈಟ್ ಹಾಗೂ ಫ್ಲ್ಯಾಟ್‌ಗಳನ್ನು ಮಾರಾಟ ಮಾಡುವ ವಾಣಿಜ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿವೆ. ಇದೇ ರೀತಿ ಬಿಎಂಟಿಸಿ ಕೂಡ ಕಾರ್ಯನಿರ್ವಹಿಸುತ್ತಿದೆ. ಈ ಅಂಶವನ್ನು ಪರಿಗಣಿಸದೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಆದ ಬಿಬಿಎಂಪಿ ಆಡಳಿತಾಧಿಕಾರಿಯು ಪಾಲಿಕೆಗೆ ನಷ್ಟ ಕೈತಪ್ಪುತ್ತದೆ ಎಂಬ ಒಂದೇ ಕಾರಣಕ್ಕೆ ಪ್ರಸ್ತಾಪವನ್ನು ತಿರಸ್ಕರಿಸಿ ದ್ವಂದ್ವ ನಿಲುವು ತಳೆದಿದೆ. ಇದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.
ನಿರ್ಧಾರ ಮರುಪರಿಶೀಲಿಸಲು ಮನವಿ:
ಆಸ್ತಿತೆರಿಗೆ ವಿನಾಯಿತಿ ಸಂಬಂಧ ಈಗಾಗಲೇ ಇತರ ಸಂಸ್ಥೆಗಳಿಗೆ ನೀಡಿರುವುದನ್ನು ಅನ್ವಯಿಸಲು ತೀರ್ಮಾನವನ್ನು ಮರುಪರಿಶೀಲಿಸಲು ಕೋರಿ ಬಿಎಂಟಿಸಿ ನಗರಾಭಿವೃದ್ಧಿ ಇಲಾಖೆಗೆ (ಯುಡಿಡಿ) ಮೊರೆ ಇಟ್ಟಿದೆ. ನಿತ್ಯ ನಗರದ 50 ಲಕ್ಷ ಜನರಿಗೆ ನೀಡುತ್ತಿರುವ ಸೌಲಭ್ಯವನ್ನು ವಾಣಿಜ್ಯ ಉದ್ದೇಶವೆಂದು ಪರಿಗಣಿಸದೆ ಸೇವೆ ಎಂದು ಭಾವಿಸಿ ತೆರಿಗೆ ವಿನಾಯಿತಿ ನೀಡುವಂತೆ ಅಹವಾಲು ಇಟ್ಟಿದೆ.