ಅವಶ್ಯಕ ಸೇವೆ ಒದಗಿಸುವವರಿಗೆ ಇಂದಿನಿಂದ ಬಿಎಂಟಿಸಿ ಬಸ್ ಸೇವೆ: ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ

BMTC
Published on

ಬೆಂಗಳೂರು: ಅಗತ್ಯ ಸೇವೆ ನೀಡುವವರಿಗಾಗಿ ಮಾತ್ರವೇ ಇಂದಿನಿಂದ ಕೆಲವು ನಿರ್ದಿಷ್ಟ ಮಾರ್ಗಗಳಲ್ಲಿ ಬಿಎಂಟಿಸಿ ಬಸ್ಸುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ಇಂದಿನಿಂದ ಬಿಎಂಟಿಸಿ ಸೇವೆ ಇರೋದು ಜನಸಾಮಾನ್ಯರಿಗಲ್ಲ. ಅವಶ್ಯಕ ಸೇವೆಗಳ ನೌಕರರಿಗೆ ಮಾತ್ರ. ಅವಶ್ಯಕ ಸೇವೆಗಳ ಪಟ್ಟಿಯಲ್ಲಿ ವೈದ್ಯರು, ದಾದಿಯರು, ಆಸ್ಪತ್ರೆ ನೌಕರರು, ಸೆಕ್ಯೂರಿಟಿ ಗಾರ್ಡ್‌ಗಳು, ಬ್ಯಾಂಕ್ ಉದ್ಯೋಗಿಗಳು ಹಾಗೂ ಮಾಧ್ಯಮದವರಷ್ಟೇ ಈ ಬಿಎಂಟಿಸಿಯಲ್ಲಿ ಪ್ರಯಾಣಿಸಲು ಸಾಧ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರತಿ ಬಸ್ಸಿನಲ್ಲಿ ಗರಿಷ್ಠ 20 ಜನ ಮಾತ್ರ ಪ್ರಯಾಣಿಸಬಹುದಾಗಿರುತ್ತದೆ. ಬಸ್ಸನ್ನು ಚಲಾಯಿಸುವ ಎಲ್ಲ ಚಾಲಕ ನಿರ್ವಹಕರುಗಳಿಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ. ಪ್ರತಿಯೊಂದು ವಾಹನದಲ್ಲಿ 20 ಕ್ಕಿಂತ ಮೀರದಂತೆ ಪ್ರಯಾಣಿಕರು ಪ್ರಯಾಣಿಸಬಹುದು.

ಪೊಲೀಸ್ ಸಿಬ್ಬಂದಿ, ಆಸ್ಪತ್ರೆ ಸಿಬ್ಬಂದಿ, ಮೆಡಿಕಲ್ ಶಾಪ್, ಕಾರ್ಪೊರೇಷನ್, ಮೆಟ್ರೋ ಸಿಬ್ಬಂದಿ, ಖಾಸಗಿ ಸೆಕ್ಯೂರಿಟಿ ಗಾರ್ಡ್,ಬ್ಯಾಂಕ್ ಸಿಬ್ಬಂದಿ, ರಕ್ತ ದಾನಿಗಳು, ಅಲ್ಲದೆ ಆಸ್ಪತ್ರೆಗೆ ಭೇಟಿ ನೀಡುವ ನಾಗರೀಕರು, ರೋಗಿಗಳನ್ನು ಪ್ರಯಾಣಿಸಲೂ ಅವಕಾಶ ಕಲ್ಪಿಸಲಾಗಿದೆ. ಇವರಲ್ಲದೆ ಪೊಲೀಸ್ ಇಲಾಖೆಯಿಂದ ಪಾಸ್ ಪಡೆದಿರುವ ಅಂಗಡಿ ಕಾರ್ಮಿಕರು, ಡೆಲಿವರಿ ಹುಡುಗರು, ಪೆಟ್ರೋಲ್ ಬಂಕ್ ಸಿಬ್ಬಂದಿ, ಹೋಟೆಲ್ ಸಿಬ್ಬಂದಿಯನ್ನು ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ರಾಜ್ಯದೆಲ್ಲೆಡೆ ಕೊರೊನ ಮಹಾಮಾರಿಯನ್ನು ತಡೆಯ್ಯುವ ಪ್ರಯುಕ್ತ ಲಾಕ್ ಡೌನ್ ಘೋಷಿಸಿದೆ.ಇದರ ನಡುವೆ ತುರ್ತು ಸೇವೆಗಳ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ ಬಿಎಂಟಿಸಿ ಯ ಬಸ್ಸುಗಳನ್ನು ಕಾರ್ಯಾಚರಣೆ ಗೊಳಿಸಲಾಗುತ್ತಿದೆ. ಸದರಿ ಸೇವೆಯು ತುರ್ತು ಸೇವೆಗಳ ಸೌಲಭ್ಯಗಳನ್ನು ಒದಗಿಸುವ ಸಿಬ್ಬಂದಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಈ ಸೇವೆ ಪಡೆಯಲು ಪೊಲೀಸ್ ಸಂಸ್ಥೆ ವಿತರಿಸಿರುವ ಗುರುತಿನ ಚೀಟಿ ಅತ್ಯಾವಶ್ಯವಾಗಿರುತ್ತದೆ

ಜನಸಾಮಾನ್ಯರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬೇಡಿ. ದಯವಿಟ್ಟು ಸಾರ್ವಜನಿಕರು ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು ಸಹಕರಿಸಬೇಕು ಎಂದು ಡಿಸಿಎಂ ಲಕ್ಷ್ಮಣ ಸವದಿ ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net