ಜೋರು ಮಳೆಯ ನಡುವೆಯೂ ಹೊತ್ತಿ ಉರಿದ BMTC ಬಸ್​; ವಿಡಿಯೋ ವೈರಲ್​

Bus Fire
Published on

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನ ಜೀವನಾಡಿ ಎಂದೇ ಹೆಸರುವಾಸಿಯಾಗಿರುವ ಬಿಎಂಟಿಸಿ ಬಸ್​ಗಳು ಬೆಂಕಿಗಾಹುತಿಯಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದು, ಇದೀಗ ಎಲೆಕ್ಟ್ರಿಕ್​ ಬಸ್ಸೊಂದು ಜೋರು ಮಳೆಯ ನಡುವೆಯೂ ಧಗಧಗನೆ ಹೊತ್ತಿ ಉರಿದಿರುವ ಘಟನೆ ಬೆಳಕಿಗೆ ಬಂದಿದೆ.

ಘಟನೆಯು ಬೆಂಗಳೂರು ನಗರದ ನಾಗವಾರ- ಹೆಬ್ಬಾಳ ಸರ್ವೀಸ್​ ರಸ್ತೆಯಲ್ಲಿ ನಡೆದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಾಲಕನ ಸಮಯ ಪ್ರಜ್ಞೆಗೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ನಿನ್ನೆ (ಆಗಸ್ಟ್​ 05) ಸುರಿದ ಭಾರೀ ಮಳೆಗೆ ಮಾನ್ಯತಾ ಟೆಕ್​ ಪಾರ್ಕ್​ ಬಳಿ ಇರುವ  ಸರ್ವಿಸ್​ ರಸ್ತೆಯಲ್ಲಿ ನೀರು ತುಂಬಿಕೊಂಡಿತ್ತು. ಇದೇ ಮಾರ್ಗದಲ್ಲಿ ಬಂದ ಎಲೆಕ್ಟ್ರಿಕ್​ ಬಸ್​ನಲ್ಲಿ ಹೊಗೆ ಕಾಣಲು ಆರಂಭಿಸಿದೆ. ಇದನ್ನು ಗಮನಿಸಿದ ಚಾಲಕ ಕೂಡಲೇ ಪ್ರಯಾಣಿಕರನ್ನು ಕೆಳಗಿಳಿಸಿ ದೂರಕ್ಕೆ ಕಳುಹಿಸಿದ್ದಾನೆ.ಬಸ್​ ಕ್ಷಣಾರ್ಧದಲ್ಲೇ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳುವ ವೇಳೆಗಾಗಲೇ ಬಸ್​ ಸುಟ್ಟು ಬೂದಿಯಾಗಿತ್ತು. ಬಸ್​ನಲ್ಲಿ ಉಂಟಾದ ಶಾರ್ಟ್​​​​ ಸರ್ಕ್ಯೂಟ್​​ನಿಂದ ಅವಘಡ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net