ಗುಣಮಟ್ಟದ ಹಾಲು ಪೂರೈಸಿದರೆ ಸಂಘಗಳ ಬೆಳವಣಿಗೆ ಸಾಧ್ಯ: ಮನ್‌ಮುಲ್ ನಿರ್ದೇಶಕ ಎಚ್.ಟಿ.ಮಂಜು ಸಲಹೆ

11-krp-03
Published on


ಕೆ.ಆರ್.ಪೇಟೆ: ಹೈನುಗಾರರು ಗುಣಮಟ್ಟದ ಹಾಲು ಪೂರೈಸಿದರೆ ಮಾತ್ರ ಸಂಘ ಮತ್ತು ಉತ್ಪಾದಕರ ಆದಾಯ ಹೆಚ್ಚುತ್ತದೆ ಎಂದು ಮನ್‌ಮುಲ್ ನಿರ್ದೇಶಕ ಎಚ್.ಟಿ.ಮಂಜು ಹೇಳಿದರು.
ತಾಲೂಕಿನ ಕಸಬಾ ಹೋಬಳಿ ಮಾಕವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಬಿಎಂಸಿ ಘಟಕ ಉದ್ಘಾಟನೆ ಹಾಗೂ ಸಂಘದ ಬೆಳ್ಳಿ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗುಣಮಟ್ಟದ ಹಾಲು ಪೂರೈಸಲು ಹಸುಗಳ ಆರೋಗ್ಯ ಮುಖ್ಯ. ತಾಲೂಕಿನಲ್ಲಿ ಅತಿ ಹೆಚ್ಚು ರೈತರು ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವುದರಿಂದ ಹಾಲು ಉತ್ಪಾದನೆಯಲ್ಲಿ ತಾಲೂಕು ಜಿಲ್ಲೆಯಲ್ಲೇ ಪ್ರಥಮ ಸ್ಥಾನದಲ್ಲಿದೆ. ಅದರಂತೆ ನಾವು ಹಾಲಿನ ಗುಣಮಟ್ಟವನ್ನು ಕಾಪಾಡಿಕೊಂಡರೆ ಸಂಘಗಳಿಗೆ ಕೀರ್ತಿ ಸಿಗಲಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಮನ್ಮುಲ್ ನಿರ್ದೇಶಕ ಡಾಲು ರವಿ ಕಟ್ಟಡ ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ ಸುಮಾರು 40ಕ್ಕೂ ಹೆಚ್ಚು ಹಾಲು ಶೀತಲೀಕರಣ ಘಟಕ ಕಾರ್ಯನಿರ್ವಹಿಸುತ್ತಿವೆ. ಪ್ರತಿಯೊಬ್ಬ ರೈತ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವುದರಿಂದ ಗುಣಮಟ್ಟದ ಹಾಲು ಪೂರೈಸುವುದರ ಜೊತೆಗೆ ಸಂಘದಲ್ಲಿ ಸಿಗುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಎಂ.ಸಿ.ರವಿಕುಮಾರ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ 2 ಲಕ್ಷ ರೂ., ಮನ್ಮುಲ್ ಮತ್ತು ಕೆಎಂಎಫ್ ವತಿಯಿಂದ 4.50 ಲಕ್ಷ ರೂ.ಸಹಾಯಧನ ನೀಡಿದ್ದು, ಇದರಿಂದ ಕಟ್ಟಡ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದು ಹೇಳಿದರು.
ಮನ್ಮುಲ್ ವ್ಯವಸ್ಥಾಪಕ ಪ್ರಭಾಕರ್, ಮಾರ್ಗ ವಿಸ್ತರಣಾಧಿಕಾರಿ ಶಿವಶಂಕರ್, ನಾಗಪ್ಪ ಅಲಿಬಾದಿ, ಉಪಾಧ್ಯಕ್ಷ ಕೃಷ್ಣಮೂರ್ತಿ, ನಿರ್ದೇಶಕರಾದ ಮಂಜೇಗೌಡ, ರಾಜೇಗೌಡ, ಎಂ.ಟಿ.ಕುಮಾರ್, ಮಂಜೇಗೌಡ, ಸಿಂಗೇಗೌಡ, ಚಿಕ್ಕೇಗೌಡ, ಚೆಲುವಯ್ಯ, ಪಟೇಲ್ ದೇವರಸೇಗೌಡ, ಮಮತಾ, ಗೌರಮ್ಮ, ಕಾರ್ಯದರ್ಶಿ ಚಿನ್ನಸ್ವಾಮಿ, ಪರೀಕ್ಷಕ ರಾಮಚಂದ್ರ, ಸಹಾಯಕ ಶಿವಣ್ಣಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net