ಮಂಗಳೂರು: ಮಾಜಿ ಶಾಸಕ, ಕವಿ, ಸಾಹಿತಿ, ಬಿ.ಎಂ.ಇದಿನಬ್ಬ ಅವರ ಸ್ಮರಣಾರ್ಥ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಶುಕ್ರವಾರ ನಗರದ ಪುರಭವನದಲ್ಲಿ ಆಯೋಜಿಸಲಾಗಿದ್ದ ಬಿ.ಎಂ. ಇದಿನಬ್ಬ ಜನ್ಮ ಶತಮಾನೋತ್ಸವ ( ಮರ್ಹೂಂ ಬಿ.ಎಂ. ಇದಿನಬ್ಬ ನೂರು ವರ್ಸೆ ಒರು ನೆನಪು) ಕಾರ್ಯಕ್ರಮದಲ್ಲಿ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅವರಿಗೆ ದಿ.ಬಿ.ಎಂ.ಇದಿನಬ್ಬ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್.ನಾಗಾಭರಣ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ 10 ಸಾವಿರ ರೂ.ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಇದಿನಬ್ಬ ಅವರ ಮಕ್ಕಳಾದ ಬಿ.ಎಂ. ಬದ್ರುದ್ದೀನ್ ಮತ್ತು ಬಿ.ಎಂ. ಅಬ್ದುಲ್ ರೆಹಮಾನ್ ಅವರುನ್ನು ಈ ವೇಳೆ ಸನ್ಮಾನಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸಂಸ್ಮರಣಾ ಭಾಷಣ ಮಾಡಿದರು. ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಅಧ್ಯಕ್ಷತೆ ವಹಿಸಿದ್ದರು. ರಿಜಿಸ್ಟ್ರಾರ್ ಪೂರ್ಣಿಮಾ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಉಳ್ಳಾಲ ಸೈಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮುಖ್ಯ ಅತಿಥಿಯಾಗಿದ್ದರು.