

ಬೆಂಗಳೂರು: ಬಹು ಉಪಯೋಗಿ ಕೃಷ್ಣಾ-ತುಂಗಭದ್ರಾ- ವಾಣಿ ವಿಲಾಸ ಸಾಗರ ಜೋಡಣೆ ಸೇರಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಸಂಬಂಧಿಸಿದ ನೀಲಿನಕ್ಷೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿ, ಕಾರ್ಯಸಾಧ್ಯತೆ ಪರಿಶೀಲಿಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಬಿಎಸ್ವೈ ಅವರನ್ನು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ, ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಬುಧವಾರ ಭೇಟಿಯಾದ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ.
ದಕ್ಷಿಣದ ಬದಲು ಉತ್ತರ: ಯೋಜನೆಯ ರೂಪು-ರೇಷೆ ಇನ್ನಿತರ ವಿವರಗಳನ್ನು ಸಿಎಂ ಆಸಕ್ತಿಯಿಂದ ಆಲಿಸಿ, ದಕ್ಷಿಣದ ಡ್ಯಾಂ ನಿಂದ ನೀರು ತಂದು ಬೆಂಗಳೂರು ಮಹಾ ನಗರದ ಕುಡಿಯುವ ನೀರು ಪೂರೈಸುವ ಯೋಜನೆ ಸರ್ಕಾರದ ಮುಂದಿದೆ. ಆದರೆ ಉತ್ತರ ಭಾಗದಿಂದ ನೀರು ಕೊಡುವ ಈ ಪ್ರಸ್ತಾವನೆಯೂ ಸಮುಚಿತವಾಗಿದೆ ಎಂದಿದ್ದಾರೆ. ಅಲ್ಲದೆ, ಅಪರ ಮುಖ್ಯ ಕಾರ್ಯದರ್ಶಿ ಎನ್.ರವಿಕುಮಾರ್ ಹಾಗೂ ಹಣಕಾಸು ಇಲಾಖೆ ಅಧಿಕಾರಿಗೆ ವಸ್ತುಸ್ಥಿತಿ ಪರಿಶೀಲಿಸಿ ಕಾರ್ಯಸಾಧ್ಯತೆ ವರದಿ ಸಲ್ಲಿಸಬೇಕು ಎಂದು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ಹರಿಸುವ ಚಿಂತನೆಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಪರಿಸರ, ಜೀವವೈವಿಧ್ಯತೆ, ಪಶ್ಚಿಮ ಘಟ್ಟಕ್ಕೂ ಮಾರಕವೆಂಬ ಅಪಸ್ವರ ಬಲವಾಗಿದೆ. ಹೀಗಾಗಿ ಕೃಷ್ಣಾ-ತುಂಗಭದ್ರಾ- ವಾಣಿ ವಿಲಾಸ ಸಾಗರ ಜೋಡಣೆಯಿಂದ ಹೆಚ್ಚಿನ ಅನುಕೂಲವಾದೀತು ಎಂಬ ಚಿಂತನೆ ಸಿಎಂ ಅವರಲ್ಲಿದೆ ಎಂದು ಮೂಲಗಳು ತಿಳಿಸಿವೆ.