

ಮಹಾಲಿಂಗಪುರ: ಸ್ಥಳೀಯ ಸಾಮಾಜಿಕ ಹೋರಾಟಗಾರ, ಪುರಸಭೆ ಮಾಜಿ ಉಪಾಧ್ಯಕ್ಷ ಚನಬಸು ಹುರಕಡ್ಲಿ ಮಹಾಲಿಂಗಪುರ ಪಟ್ಟಣವನ್ನು ಅಭಿವದ್ಧಿಪಡಿಸುವ ತಮ್ಮದೇ ಆದ ನೀಲನಕ್ಷೆ ತಯಾರಿಸಿದ್ದು, ಅದಕ್ಕೆ ಸಾರ್ವಜನಿಕರು ಮತ್ತು ಸಂಘ- ಸಂಸ್ಥೆಗಳು ನಿಸ್ವಾರ್ಥವಾಗಿ ಬೆಂಬಲಿಸಿ, ಪಟ್ಟಣದ ಅಭಿವದ್ಧಿಗೆ ಸಹಕರಿಸಲು ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಪಟ್ಟಣದ ಜನಕ್ಕೆ ಅಂತರ್ಜಲದ ಮೂಲಾಧಾರವಾದ ಕೆರೆಯನ್ನು ಸರ್ಕಾರದ ಅನುದಾನದಿಂದ ಇನ್ನಷ್ಟು ಅಭಿವದ್ಧಿಪಡಿಸಿ ಅದರ ಸುತ್ತಲೂ ಸಿಸಿ ರಸ್ತೆ ಮತ್ತು ಗ್ರಿಲ್ ಅಳವಡಿಸುವುದು. ಬೋಟಿಂಗ್ ಹಾಗೂ ಮೀನು ಸಾಕಾಣಿಕೆ ಮಾಡುವುದರಿಂದ ಕೆರೆಯ ನೀರು ಸ್ವಚ್ಛವಾಗಿ ಉಳಿಯುತ್ತದೆ. ಜೊತೆಗೆ ಸರ್ಕಾರಕ್ಕೆ ಆದಾಯ ಕೂಡಾ ಬರುತ್ತದೆ. ಕೆರೆಯ ಪಕ್ಕದಲ್ಲಿರುವ ಪುರಸಭೆಯ ನಾಲ್ಕು ಎಕರೆ ಜಾಗದಲ್ಲಿ ಸುಂದರ ಉದ್ಯಾನವನ ಹಾಗೂ ಸರ್ಕಾರಿ ಕಚೇರಿಗಳ ಕಟ್ಟಡಗಳನ್ನು ನಿರ್ಮಿಸುವುದರಿಂದ ಸಾರ್ವಜನಿಕರಿಗೆ ಕಚೇರಿ ಕೆಲಸಕ್ಕೆ ಬರಲು ಮತ್ತು ವಾಯು ವಿಹಾರಿಗಳಿಗೆ ಅನುಕೂಲವಾಗಲಿದೆ.
ಹಿಂದು ರುದ್ರಭೂಮಿಯಲ್ಲಿ ಶವ ದಹನ ಕಟ್ಟೆ ಕಟ್ಟಿಸಿ ಅದಕ್ಕೆ ಮಳೆ, ಬಿಸಿಲುಗಳಿಂದ ರಕ್ಷಣೆ ನೀಡಲು ಶೆಡ್ ನಿರ್ಮಾಣ ಮಾಡಬೇಕು.ದಹನಕ್ಕೆ ಬೇಕಾಗುವ ಕಟ್ಟಿಗೆ ದಾಸ್ತಾನು ಮಾಡಲು ಸ್ಥಳಾವಕಾಶ, ಧಾರ್ಮಿಕ ಕ್ರಿಯೆಗಳನ್ನು ಮಾಡಲು ಅಗತ್ಯವಾದ ಶಿವಮಂದಿರ, ಶೌಚಾಲಯ ನಿರ್ಮಾಣ ಮತ್ತು ರುದ್ರಭೂಮಿಯನ್ನು ಪರರು ಅತಿಕ್ರಮಣ ಮಾಡದಂತೆ ಕಬ್ಬಿಣದ ಸಲಾಖೆಗಳಿಂದ ಆವರಣ ನಿರ್ಮಿಸುವ ಅವಶ್ಯಕತೆ ಇದೆ.
ಇನ್ನು ಪಟ್ಟಣದ ಗಾಂಧಿ ಸರ್ಕಲ್ ಹತ್ತಿರ ಇರುವ ಸರ್ಕಾರಿ ಆಸ್ಪತ್ರೆಯ ಶಿಥಿಲಾವಸ್ಥೆಯಲ್ಲಿರುವ ಹಳೆಯ ಕಟ್ಟಡ ಈಗ ಖಾಲಿ ಇದ್ದು ಜಿಲ್ಲಾ ಪಂಚಾಯತಿ ಅಧೀನದಲ್ಲಿದೆ. ಅದನ್ನು ಪುರಸಭೆಗೆ ಹಸ್ತಾಂತರಿಸಿ ಎರಡು ಅಂತಸ್ತಿನ ನೂತನ ಕಟ್ಟಡ ನಿರ್ಮಿಸಿ, ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳನ್ನು ಮತ್ತು ನಮ್ಮ ಕ್ಲಿನಿಕ್ ಆರಂಭಿಸಬೇಕು.
ಯುಜಿಡಿ ಯೋಜನೆಯನ್ನು ಅನುಷ್ಠಾನಗೊಳಿಸಿ ಒಳಚರಂಡಿ ನಿರ್ಮಾಣ ಮಾಡಿ, ಸಾರ್ವಜನಿಕರು ಕಡಿಮೆ ಖರ್ಚಿನಲ್ಲಿ ಸೆಪ್ಟಿಕ್ ಟ್ಯಾಂಕ್ ಇಲ್ಲದೆ ಶೌಚಾಲಯ ನಿರ್ಮಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು. ಇದರಿಂದ ಪಟ್ಟಣವನ್ನು ಬಯಲು ಶೌಚಮುಕ್ತವಾಗಿಸಬಹುದು.
ಕಷ್ಣಾ ನದಿಯಿಂದ ಪೈಪ್‌ಲೈನ್ ಮೂಲಕ ಶುದ್ಧೀಕರಣ ಘಟಕಕ್ಕೆ ನೀರು ತಂದರೆ ಕುಡಿಯುವ ನೀರಿನ ಹೆಚ್ಚಿನ ವ್ಯವಸ್ಥೆಯಾಗುತ್ತದೆ. ಉಳಿದ ನೀರಿನಿಂದ ಕೆರೆಗಳನ್ನು ತುಂಬಿಸುವುದರಿಂದ ಅಂತರ್ಜಲಮಟ್ಟ ಹೆಚ್ಚಾಗುತ್ತದೆ ಎಂದು ಚನಬಸು ತಿಳಿಸಿದ್ದಾರೆ.