ಬ್ಲೂ ಸೋಲ್ಜರ್ಸ್ ‘ಕೆವಿಎಸ್ ಕಪ್’ ಚಾಂಪಿಯನ್: ರೆಡ್ ಚಾಲೆಂಜರ್ಸ್‌ಗೆ ರನ್ನರ್‌ಅಪ್ ಪಟ್ಟ

Blue Soldiers KVS Cup Champion Mandya
Published on

ಮಂಡ್ಯ: ಪಿಇಟಿ ಸಂಸ್ಥೆಯ ಸಂಸ್ಥಾಪಕರೂ ಆದ ನಿತ್ಯಸಚಿವ ಕೆ.ವಿ.ಶಂಕರಗೌಡ ಸ್ಮರಣಾರ್ಥ ಆಯೋಜಿಸಿರುವ ಮೂರು ದಿನದ ಟಿ-20 ಕ್ರಿಕೆಟ್ ಪ್ರೀಮಿಯರ್ ಲೀಗ್ ‘ಕೆವಿಎಸ್ ಕಪ್’ ಟೂರ್ನಿಯ ಮೊದಲ ಆವೃತ್ತಿಯಲ್ಲಿ ನಟ ರವಿಶಂಕರ್‌ಗೌಡ ನಾಯಕತ್ವದ ಪಿಇಟಿ ಬ್ಲೂ ಸೋಲ್ಜರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.

ನಗರದ ಪಿಇಟಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಲೂಸ್‌ಮಾದ ಖ್ಯಾತಿಯ ಯೋಗೇಶ್ ಪಿಇಟಿ ರೆಡ್ ಚಾಲೆಂಜರ್ಸ್ ತಂಡವನ್ನು ಐದು ವಿಕೆಟ್‌ಗಳ ಅಂತರದಲ್ಲಿ ಸೋಲಿಸಿ ಕೆವಿಎಸ್ ಕಪ್ ಮುಡಿಗೇರಿಸಿಕೊಂಡಿತು. ಮೊದಲು ಬ್ಯಾಟ್ ಮಾಡಿದ ರೆಡ್ ಚಾಲೆಂಜರ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತು. ತಂಡದ ಪರ ನಾಯಕ ಯೋಗೇಶ್ 41 ಹಾಗೂ ಯಶಸ್ 40 ರನ್ ಗಳಿಸಿದರು. ಸಾಧಾರಣ ಮೊತ್ತ ಬೆನ್ನತ್ತಿದ ಪಿಇಟಿ ಬ್ಲೂ ಸೋಲ್ಜರ್ಸ್ ತಂಡ 19 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. 10 ಓವರ್‌ಗೆ 5 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಗಗನ್‌ಕುಮಾರ್ 48 ಹಾಗೂ ಕಾರ್ತಿಕ್ 42 ರನ್‌ಗಳನ್ನು ಗಳಿಸಿ ಗೆಲುವಿನ ದಡ ಸೇರಿಸಿದರು. ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಬ್ಲೂ ಸೋಲ್ಜರ್ಸ್‌ನ ಸಾಕೇತ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಗಳಿಸಿದರು.

ಮೂರು ದಿನ ನಡೆದ ಟೂರ್ನಿಗೆ ಕನ್ನಡ ಚಿತ್ರರಂಗದ ನಟರು ಹಾಗೂ ರಾಜ್ಯ ಮಹಿಳಾ ಕ್ರಿಕೆಟ್ ತಂಡ ಆಟಗಾರರು ಭಾಗವಹಿಸುವ ಮೂಲಕ ಪಂದ್ಯಾವಳಿಯ ಮೆರಗು ನೀಡಿದರು. ಟೂರ್ನಿಗೆಂದು ನಾಲ್ಕು ತಂಡ ರಚನೆ ಮಾಡಲಾಗಿತ್ತು. ಚಿತ್ರನಟರಾದ ಲೂಸ್‌ಮಾದ ಖ್ಯಾತಿಯ ಯೋಗೇಶ್, ಕೆಜಿಎ್ ಗರುಡ ಖ್ಯಾತಿಯ ರಾಮ್, ರವಿಶಂಕರ್‌ಗೌಡ, ಹರ್ಷ ಸಿ.ಎಂ.ಗೌಡ, ವಿವಾನ್, ಸಾಗರ್ ಬಿಳೀಗೌಡ, ಅಭಿಲಾಷ್ ದಳಪತಿ, ರಂಜಿತ್‌ಕುಮಾರ್, ದಿಲೀಪ್ ಕೆಂಪೇಗೌಡ, ದರ್ಶಿತ್, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಗಾಯಕರಾದ ವ್ಯಾಸರಾಜ್, ಕರಿಬಸವ ತಡಕಲ್ ಜತೆಗೆ ಪ್ರಾದೇಶಿಕ ಕ್ರಿಕೆಟ್ ಆಟಗಾರರು ಭಾಗವಹಿಸಿದ್ದಾರೆ. ಇದಲ್ಲದೆ ರಾಜ್ಯ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿರುವ ನೇಸರ ಸಪ್ತಗಿರೀಶ್, ತಾನ್ವಿ, ಲಿಯಾಂಕ ಶೆಟ್ಟಿ, ಜ್ಯೋಸ್ನಾ, ಹರ್ಷಿತಾ, ಕಾವ್ಯಾ, ಹಂಸಾ ಟೂರ್ನಿಯಲ್ಲಿ ಪಾಲ್ಗೊಂಡರು.

ನಾಲ್ಕು ತಂಡ ಮೂರು ದಿನದಲ್ಲಿ ಏಳು ಪಂದ್ಯ ಆಡಿದವು. ಮೊದಲೆರೆಡು ಸ್ಥಾನ ಗಳಿಸಿದ ತಂಡ ಫೈನಲ್ ಪ್ರವೇಶಿಸಿದವು. ಬ್ಲೂ ಸೋಲ್ಜರ್ಸ್‌ನ ಹರ್ಷಿತ್ 133 ರನ್ ಗಳಿಸಿ ಟೂರ್ನಿಯ ಟಾಪರ್ ಎನಿಸಿದರು. ರೆಡ್ ಚಾಲೆಂಜರ್ಸ್‌ನ ಸಂತೋಷ್ ಆರು ವಿಕೆಟ್ ಪಡೆದು ಗರಿಷ್ಟ ವಿಕೆಟ್ ಪಡೆದ ಸ್ಥಾನ ಅಲಂಕರಿಸಿದರು. ವಿಜೇತರಿಗೆ ಪಿಇಟಿ ಸಂಸ್ಥೆ ಉಪಾಧ್ಯಕ್ಷ ಶ್ರೀಧರ್, ಖಜಾಂಚಿ ರವಿಶಂಕರ್, ನಿರ್ದೇಶಕ ಡಾ.ರಾಮಲಿಂಗಯ್ಯ ಬಹುಮಾನ ವಿತರಿಸಿದರು. ಪಂದ್ಯಾವಳಿಯ ನಿರ್ವಾಹಕ ನಂದಕಿಶೋರ್, ಪಿಇಟಿ ಸಂಸ್ಥೆಯ ದೈಹಿಕ ಶಿಕ್ಷಣ ಸಹಾಯಕ ನಿರ್ದೇಶಕ ಡಾ.ಅನಂತಪದ್ಮನಾಭ ಪ್ರಭು, ಮಾಧ್ಯಮ ಮತ್ತು ಪ್ರಚಾರ ಅಧಿಕಾರಿ ಡಾ.ಕೋದಂಡರಾಮು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net