ಡಿಸಿಸಿ ಬ್ಯಾಂಕಿಗೆ ಬ್ಯಾಂಕೋ ಬ್ಲೂ ರಿಬ್ಬನ್ ಗೌರವ ; ಹಣಕಾಸು, ಆಡಳಿತ, ತಾಂತ್ರಿಕತೆಯ ಅಳವಡಿಕೆಯಲ್ಲಿ ದೇಶಕ್ಕೆ ನಂ.1

29-klr-15
Published on

ಕೋಲಾರ : ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ದೇಶದ ನಂ.1 ಬ್ಯಾಂಕ್ ಎಂಬ ಗೌರವಕ್ಕೆ ಪಾತ್ರವಾಗಿದೆ. ಹಣಕಾಸು, ಆಡಳಿತ, ತಾಂತ್ರಿಕತೆ ಅಳವಡಿಕೆಯಲ್ಲಿನ ಸಾಧನೆಗಾಗಿ ಎವಿಐಇಎಸ್ ಪಬ್ಲಿಕೇಷನ್ ಸಂಸ್ಥೆ ನೀಡುವ ‘ಬ್ಯಾಂಕೋ ಬ್ಲೂ ರಿಬ್ಬನ್ ಪ್ರಶಸ್ತಿ -2020’ ಪಡೆದಿದೆ.

ಮಹಾರಾಷ್ಟ್ರದ ಕೊಲ್ಲಾಪುರದ ಈ ಸಂಸ್ಥೆ ದೇಶದ ಎಲ್ಲ ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ಸಹಕಾರಿ ಬ್ಯಾಂಕ್‌ಗಳ ಮಾಹಿತಿ ಪಡೆದು ಕೋಲಾರ ಡಿಸಿಸಿ ಬ್ಯಾಂಕನ್ನು ನಂ.1 ಎಂದು ಆಯ್ಕೆ ಮಾಡಿದೆ.  2018-19, 2019-20ನೇ ಸಾಲಿನಲ್ಲಿ ಬ್ಯಾಂಕಿನ ಹಣಕಾಸು ಪ್ರಗತಿ, ಆಡಳಿತ ಸಾಧನೆ, ತಾಂತ್ರಿಕತೆ, ಗಣಕೀಕರಣ ಅಳವಡಿಕೆ ಮತ್ತಿತರ ಅಂಶಗಳ ಆಧಾರದ ಮೇಲೆ ಆಯ್ಕೆ ನಡೆದಿದೆ. ಈ ಸಂಬಂಧ ಅಭಿನಂದನೆ ಸಲ್ಲಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರಿಗೆ ಪತ್ರ ಬರೆದಿದ್ದು, ಮೈಸೂರಿನಲ್ಲಿ ಮಾರ್ಚ್ ಮೊದಲ ವಾರ ನಡೆಯುವ ‘ಬ್ಯಾಂಕೋ ಬ್ಲೂ ರಿಬ್ಬನ್-2020’ ಕಾರ್ಯಕ್ರಮದಲ್ಲಿ ಗೌರವ ಪ್ರದಾನ ನಡೆಯಲಿದೆ.

44 ಕೋಟಿ ರೂ. ನಷ್ಟದೊಂದಿಗೆ ಠೇವಣಿದಾರರಿಗೆ ಹಣ ವಾಪಸ್ ನೀಡಲು ಅಸಾಧ್ಯವೆನ್ನುವ ಪರಿಸ್ಥಿತಿಗೆ ತಲುಪಿದ್ದ ಡಿಸಿಸಿ ಬ್ಯಾಂಕ್ ಶೇ.95 ಎನ್‌ಪಿಎದೊಂದಿಗೆ ಅಧಃಪತನಕ್ಕೆ ತಳ್ಳಲ್ಪಟ್ಟು, ಇನ್ನೇನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಡಿಸಿಸಿ ಬ್ಯಾಂಕಿನೊಂದಿಗೆ ವಿಲೀನವಾಗಲಿದೆ ಎಂಬ ಕೂಗು ಕೇಳಿ ಬಂದಿತ್ತು. ಬ್ಯಾಲಹಳ್ಳಿ ಗೋವಿಂದಗೌಡ ಅವರ ನೇತೃತ್ವದ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ನಂತರ 44 ಕೋಟಿ ರೂ. ನಷ್ಟ ತುಂಬಿಕೊಂಡು 7 ಕೋಟಿಗೂ ಹೆಚ್ಚು ಲಾಭ ಗಳಿಸಿ, ಎನ್‌ಪಿಎ ಶೇ.2ಕ್ಕೆ ತರುವಲ್ಲಿ ಯಶಸ್ವಿಯಾಗಿದೆ.  ದೇಶದ ಬ್ಯಾಂಕಿಂಗ್ ಇತಿಹಾಸದಲ್ಲೇ ಮೊದಲ ಬಾರಿಗೆ ಮೊಬೈಲ್ ಬ್ಯಾಂಕಿಂಗ್ ವಾಹನಗಳಿಗೂ ಚಾಲನೆ ನೀಡಿ ಗ್ರಾಹಕರಿಗೆ ಮನೆ ಬಾಗಿಲಲ್ಲೇ ಸೇವೆ ಒದಗಿಸುತ್ತಿದ್ದು, ನಬಾರ್ಡ್ ಮೆಚ್ಚುಗೆಗೆ ಪಾತ್ರವಾಗಿದೆ.

ಮಹಿಳೆಯರಿಗೆ ಸಾವಿರಾರು ಕೋಟಿ ರೂ. ಸಾಲ ನೀಡಿರುವ ದೇಶದ ಏಕೈಕ ಬ್ಯಾಂಕ್ ಎಂಬ ಹೆಗ್ಗಳಿಕೆಯ ಜತೆಗೆ ರೈತರಿಗೂ ಅವಶ್ಯಕ ಸಾಲ ನೀಡುವ ಮೂಲಕ ಬ್ಯಾಂಕ್ ದೇಶದ ನಂ.1 ಬ್ಯಾಂಕ್ ಎಂಬ ಗೌರವಕ್ಕೆ ಪಾತ್ರವಾಗಿದೆ. ಈ ಸಾಧನೆ ಹಿಂದೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಶ್ರಮ ಇದೆ. ಬ್ಯಾಲಹಳ್ಳಿ ಎಂ.ಗೋವಿಂದಗೌಡ, ಅಧ್ಯಕ್ಷ, ಡಿಸಿಸಿ ಬ್ಯಾಂಕ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net