

ಬೇಲೂರು : ಪಟ್ಟಣದ ಗುರುವಾರ ಸಂಜೆ ಎರಡು ಗಂಟೆಗೂ ಹೆಚ್ಚು ಕಾಲ ಗುಡುಗು ಮಿಂಚು ಸಿಡಿಲಿನೊಂದಿಗೆ ಸುರಿದ ಮಳೆಯಿಂದ ಜೀವನ ಅಸ್ತವ್ಯಸ್ತವಾಗಿತ್ತು. ಬೇಲೂರು ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಬಿಟ್ಟೂ ಬಿಟ್ಟೂ ಬರುತ್ತಿರುವ ಮಳೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಅದರಲ್ಲೂ ಮಲೆನಾಡು ಭಾಗದ ಕಾಫಿ, ಅಡಕೆ ಹಾಗೂ ಶುಂಠಿ ಬೆಳಗಾರರಂತೂ ಸಮಯಕ್ಕೆ ಸರಿಯಾಗಿ ಬರುತ್ತಿರುವ ಮಳೆಯಿಂದ ಸಂತಸಗೊಂಡಿದ್ದಾರೆ.
ಬೆಳೆಗಳಿಗೆ ನೀರು ಹಾಯಿಸುವುದು ತಪ್ಪಿತು ಎಂದು ಹರ್ಷಗೊಂಡಿದ್ದಾರೆ. ಜತೆಗೆ ಅಲ್ಲಲ್ಲಿ ಗಾಳಿ ಮಳೆಗೆ ಒಂದೆರಡು ಮರ ಬಿದ್ದ ಘಟನೆಗಳು ಹೊರತು ಪಡಿಸಿದರೆ ಯಾವುದೇ ತೊಂದರೆ ಆಗಿಲ್ಲ. ಗುರುವಾರ ಸಂಜೆ ಗಾಳಿ ಸಹಿತ ಸುರಿದ ಮಳೆ ಪಟ್ಟಣಕ್ಕೆ ಬಂದಿದ್ದ ಜನರು ಮರಳಿ ಗ್ರಾಮಕ್ಕೆ ತೆರಳಲು
ಅಡ್ಡಿ ಮಾಡಿತು. ಬಹುತೇಕ ಜನರು ಗಂಟೆ ಗಟ್ಟಲೇ ನಿಂತಲ್ಲೇ ನಿಂತು ಪರಿತಪಿಸುವಂತಾಗಿತ್ತು. ಮೊದಲ ಮಳೆಗೆ ಜಮೀನನ್ನು ಹದ ಮಾಡಿಟ್ಟು ಕೊಂಡಿದ್ದ ರೈತರಲ್ಲಿ ಕೆಲವರು ಜೋಳ ಬಿತ್ತನೆ ಮಾಡಲು ಆರಂಭಿಸಿರುವುದು ವಿಶೇಷ. ಒಟ್ಟಾರೆ ನಿತ್ಯವೂ ಬರುತ್ತಿರುವ ಮಳೆಯಿಂದಾಗಿ ರೈತರ ಮುಖದಲ್ಲಿ ಮುಂದಹಾಸ ಮೂಡಿದೆ.
ಚಿತ್ರ:17(ಬಿಎಲ್‌ಆರ್)3-
ಗುರುವಾರ ಸಂಜೆ ಬೇಲೂರು ಪಟ್ಟಣ ಸಮೀಪದ ಎಸ್.ಸೂರಾಪುರ ಗ್ರಾಮದಲ್ಲಿ ಸುರಿಯುತ್ತಿರುವ ಬಿರುಸಾದ ಗಾಳಿ ಮಳೆ