

ಬೇಲೂರು : ವಿದ್ಯಾರ್ಥಿಗಳು ಪಠ್ಯಗಳೊಂದಿಗೆ ಮೌಲ್ಯಯುತ ಶಿಕ್ಷಣ ಪಡೆಯುವತ್ತಲೂ ಗಮನ ಹರಿಸಿದರೆ ದೇಶದ ಉತ್ತಮ ಪ್ರಜೆಯಾಗಿ ರೂಪುಗೊಳ್ಳುವ ಮೂಲಕ ಸಾರ್ಥಕ ಜೀವನಕ್ಕೆ ಸಂಕಲ್ಪ ಮಾಡಿ ಎಂದು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಹೇಳಿದರು.
ಪಟ್ಟಣ ಸಮೀಪದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐ.ಕ್ಯೂ.ಎ.ಸಿ.ಮತ್ತು ಸಮಾಜ ಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ಪ್ರಸ್ತುತ ಸಮಾಜದಲ್ಲಿ ಮೌಲ್ಯಾಧಾರಿತ ಶಿಕ್ಷಣದ ಪಾತ್ರ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಬಹುತೇಕ ಪಾಲಕರು ತಮ್ಮ ಮಕ್ಕಳಿಗೆ ವೃತ್ತಿಪರ ಶಿಕ್ಷಣಕ್ಕೆ ಅದ್ಯತೆ ನೀಡುತ್ತಾರೆ.ಮೌಲ್ಯಾಧಾರಿತ ಶಿಕ್ಷಣ ಅವರಿಗೆ ದೊರಕಬೇಕು ಎಂಬ ಚಿಂತನೆ ಮಾಡುವುದಿಲ್ಲ. ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಮತ್ತು ಸಮಾಜಮುಖಿ ಚಿಂತನೆಯೊಂದಿಗೆ ನೈತಿಕ ಮೌಲ್ಯಗಳನ್ನೂ ಕಲಿಸುತ್ತವೆ. ಇದು
ಸಾಮಾಜಿಲ ಸಾಮರಸ್ಯ ಮೂಡಿಸಲೂ ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಚಿಂತನೆ ನಡೆಸಿ
ಗೌರವದಿಂದ ಬಾಳುವ ದಿಟ್ಟ ಸಂಕಲ್ಪ ಮಾಡಬೇಕು ಎಂದರು.
ಉಪನ್ಯಾಸಕ ಎಂ.ಜೆ.ದಯಾನಂದ್ ಮಾತನಾಡಿ, ಮೌಲ್ಯಾಧಾರಿತ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ನೈತಿಕತೆ, ಪ್ರಾಮಾಣಿಕತೆ, ಸಹಾನುಭೂತಿ ಮತ್ತು ಜವಾಬ್ದಾರಿಯನ್ನು ಕಲಿಸುತ್ತದೆ. ಇದು ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಆಧಾರವಾಗಿದೆ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವ, ವಿಮರ್ಶಾತ್ಮಕ ಚಿಂತನೆ, ಸಮಸ್ಯೆ-ಪರಿಹರಿಸುವಿಕೆ ಒತ್ತಡ ನಿರ್ವಹಣೆಯಂತಹ ಜೀವನ ಕೌಶಲ್ಯಗಳನ್ನು ಕಲಿಸುತ್ತದೆ. ಇತರರ ಬಗ್ಗೆ ಸಹಾನುಭೂತಿಯೊಂದಿಗೆ ಸಹಕಾರದ ಮನೋಭಾವ ಬೆಳೆಸುವುದರಿಂದಾಗಿ ಸಮಾಜದಲ್ಲಿ ಸಾಮರಸ್ಯ ಜೀವನದಕ್ಕೆ ದಾರಿಯಾಗುತ್ತದೆ ಎಂದರು.
ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಮಹೇಶ್, ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥರಾದ ವೀರಭದ್ರಪ್ಪ, ಪದ್ಮೇಗೌಡ, ನಾಗೇಂದ್ರಪ್ಪ ಸೇರಿದಂತೆ ಇತರರಿದ್ದರು.