ಅಗಡಿಯಲ್ಲಿ ಅರಳಿದ ಡ್ರ್ಯಾಗನ್ ಫ್ರೂಟ್

Dragun Fruit
Published on

ಹಾವೇರಿ: ಕಡಿಮೆ ಕ್ಯಾಲರಿ, ಹೆಚ್ಚು ವಿಟಮಿನ್ ಹೊಂದಿರುವ, ಮಾರುಕಟ್ಟೆಯಲ್ಲಿ ಬೇಡಿಕೆಯುಳ್ಳ ಡ್ರ್ಯಾಗನ್ ಫ್ರೂಟ್’ ಬೆಳೆಯುವ ಮೂಲಕ ತಾಲೂಕಿನ ಅಗಡಿ ಗ್ರಾಮದ ರೈತರೊಬ್ಬರು ಉತ್ತಮ ಆದಾಯ ಕಂಡುಕೊಂಡಿದ್ದಾರೆ. ನರೇಗಾ ಯೋಜನೆಯಡಿ ಬೆಳೆದ ಬೆಳೆಗೆ ಮೊದಲ ವರ್ಷವೇ ಎರಡೂವರೆ ಲಕ್ಷ ರೂ. ಲಾಭ ಪಡೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.

ಜೋಳ, ಸಜ್ಜೆ, ಮೆಕ್ಕೆಜೋಳದಂತಹ ಸಾಂಪ್ರದಾಯಿಕ ಬೆಳೆಗಳಿಂದ ಬೇಸತ್ತಿದ್ದ ಅಗಡಿ ಗ್ರಾಮದ ರೈತ ರುದ್ರಪ್ಪ ಸಣ್ಣಪ್ಪನವರ ಕುಟುಂಬಕ್ಕೆ ‘ಡ್ರ್ಯಾಗನ್ ಫ್ರೂಟ್’ ವರದಾನವಾಗಿ ಪರಿಣಮಿಸಿದೆ. ರುದ್ರಪ್ಪ ಅವರು ಒಂದು ಎಕರೆ ಜಮೀನಿನಲ್ಲಿ 2022-23ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ನರೇಗಾ ಯೋಜನೆಯಡಿ ಕಳೆದ ವರ್ಷ ಬೆಳೆಯಲು ಮುಂದಾದರು. 256 ಮಾನವ ದಿನ ಸೃಜಿಸುವ ಮೂಲಕ 75,000 ಕೂಲಿ ಮೊತ್ತ ಪಡೆದು, 1,732 ಮಾನವ ದಿನಗಳನ್ನು ಸೃಜಿಸಿದ್ದಾರೆ. ಡ್ರ್ಯಾಗನ್ ಫ್ರೂಟ್ ಸಸಿಗಳನ್ನು ನಾಟಿ ಮಾಡಿ, ಗಿಡ ನೆಟ್ಟಗೆ ನಿಂತು ಹರಡಿಕೊಳ್ಳಲು ಕಲ್ಲಿನ ಕಂಬ ನೆಟ್ಟಿದ್ದಾರೆ. ನಿರಂತರವಾಗಿ ನೀರುಣಿಸಲು ಹನಿ ನೀರಾವರಿ ವ್ಯವಸ್ಥೆ ಮಾಡಿದ್ದಾರೆ.

ಸಂಪೂರ್ಣ ಸಾವಯವ ಗೊಬ್ಬರ ಬಳಕೆ ಮಾಡಿದ್ದು, ಒಂದು ಗಿಡಕ್ಕೆ ಅಂದಾಜು 600 ರೂ. ವೆಚ್ಚ ಮಾಡಿದ್ದಾರೆ. ಒಂದು ವರ್ಷದ ಬಳಿಕ ಗಿಡಗಳು ಸಮೃದ್ಧವಾಗಿ ಬೆಳೆದು ಹಣ್ಣು ಬಿಟ್ಟಿವೆ. ಒಟ್ಟು ಆರು ಲಕ್ಷ ರೂ.ವರೆಗೆ ಬಂಡವಾಳ ಹಾಕಿದ್ದು, ಕೆಜಿಗೆ 130ರವರೆಗೆ ಮಾರಾಟ ಮಾಡಿದ್ದಾರೆ. ಮೊದಲ ಬೆಳೆಯ ಆದಾಯ ಎರಡೂವರೆ ಲಕ್ಷ ರೂ. ಗಳಿಸಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಆದಾಯ ನಿರೀಕ್ಷಿಸಿದ್ದಾರೆ.

ಒಣ ಭೂಮಿಗೆ ಸೂಕ್ತ

ಕಡಿಮೆ ತೇವಾಂಶ ಇರುವ ಬಯಲು ಸೀಮೆಯಲ್ಲೂ ಈ ಬೆಳೆ ಬೆಳೆಯಬಹುದು ಎಂಬುದಕ್ಕೆ ರುದ್ರಪ್ಪ ಅವರೇ ಸಾಕ್ಷಿ. ಒಣ ಭೂಮಿಯಲ್ಲಿ ತೇವಾಂಶ ಕಡಿಮೆ ಇದ್ದರೂ ಡ್ರ್ಯಾಗನ್ ಫ್ರೂಟ್ ಬೆಳೆದು ಹೆಚ್ಚು ಆದಾಯ ಪಡೆಯಬಹುದಾಗಿದೆ. ಹೆಚ್ಚು ಶೀತವಿದ್ದರೆ ಇಳುವರಿ ಕಡಿಮೆ ಆಗಲಿದ್ದು, ಕಡಿಮೆ ತೇವಾಂಶ ಇರುವ ಒಣಭೂಮಿ ಈ ಬೆಳೆಗೆ ಸೂಕ್ತವಾಗಿದೆ.

ವಿಟಮಿನ್‌ಗಳ ಆಗರ

ಇದು ಉಷ್ಣ ವಲಯದ ಹಣ್ಣಾಗಿದ್ದು, ಕೆಂಪು ಚರ್ಮ ಮತ್ತು ವಿಶಿಷ್ಟವಾದ ಹಣ್ಣುಗಳಲ್ಲಿ ಒಂದಾಗಿದೆ. ಒಂದು ಕೆಜಿಗೆ 130 ರೂ.ವರೆಗೆ ಮಾರಾಟವಾಗುತ್ತಿದೆ. ಇದು ಸುಮಾರು 60 ಕ್ಯಾಲರಿ ಹೊಂದಿರುತ್ತದೆ. ಅಲ್ಲದೆ ಇದರಲ್ಲಿ ವಿಟಮಿನ್ ಸಿ, ಬಿ1, ಬಿ2, ಬಿ3, ಕಬ್ಬಿಣ, ಕ್ಯಾಲ್ಸಿಯಂ ಹಾಗೂ ರಂಜಕದಂತಹ ಖನಿಜಗಳನ್ನು ಹೊಂದಿದೆ.

ಸಂಪರ್ಕ: ರುದ್ರಪ್ಪ ಸಣ್ಣಪ್ಪನವರ- ಮೊ.ಸಂ. 72595 26759

ಹಾವೇರಿ ತಾಲೂಕಿನ ರೈತರು ಡ್ರ್ಯಾಗನ್ ಫ್ರೂಟ್’ ನಂತಹ ತೋಟಗಾರಿಕೆ ಬೆಳೆ ಬೆಳೆದು ಆದಾಯ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ನರೇಗಾ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು.I ಭರತ ಹೆಗಡೆ, ತಾಪಂ ಇಒ, ಹಾವೇರಿ ತಾಲೂಕಿನ ಅಗಡಿ ಭಾಗದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆ ಬೆಳೆದಿದ್ದು ಸಮೃದ್ಧವಾಗಿದೆ. ಫಸಲು ಚೆನ್ನಾಗಿ ಬಂದಿದೆ. ಮೊದಲ ವರ್ಷ ಕಡಿಮೆ ಆದಾಯ ಬಂದರೂ ಪ್ರತಿ ವರ್ಷ ಆದಾಯ ಹೆಚ್ಚಾಗಲಿದೆ. ನಮ್ಮ ಇಲಾಖೆಯಿಂದ ಸೌಲಭ್ಯ ಪಡೆದ ರೈತರು ಇತರರಿಗೆ ಮಾದರಿಯಾಗಿದ್ದಾರೆ.I ಇಮ್ತಿಯಾಜ್ ಚಂಗಾಪುರಿ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ ನಾನು ಡ್ರ್ಯಾಗನ್ ಫ್ರೂಟ್’ ಹೆಸರೇ ಕೇಳಿರಲಿಲ್ಲ. ಮೊದಲಿಗೆ ಇದರ ಬಗ್ಗೆ ನಂಬಿಕೆ ಇರಲಿಲ್ಲ. ಆದರೆ, ಮೊದಲ ಇಳುವರಿ ಕೈಗೆ ಬಂದ ಬಳಿಕ ಈಗ ಭರವಸೆ ಮೂಡಿದೆ. ರಸ್ತೆ ಪಕ್ಕದಲ್ಲೇ ನಮ್ಮ ತೋಟ ಇರುವುದರಿಂದ ಹಲವರು ತೋಟಕ್ಕೇ ಬಂದು ಖರೀದಿಸುತ್ತಿರುವುದು ಸಂತಸ ಮೂಡಿಸಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿದೆ.I ರುದ್ರಪ್ಪ ಸಣ್ಣಪ್ಪನವರ, ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net