

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹರ್‌ಘರ್ ತಿರಂಗಾ ಅಭಿಯಾನವು ದೇಶವನ್ನು ಏಕತೆಯ ದಾರದಲ್ಲಿ ಬಂಧಿಸುವ ಮತ್ತು ದೇಶಭಕ್ತಿಯ ಭಾವನೆಯನ್ನು ಬಲಪಡಿಸುವ ಸಾಮೂಹಿಕ ಅಭಿಯಾನವಾಗಿದೆ ಎಂದು ಹರ್‌ಘರ್ ತಿರಂಗಾ ಯಾತ್ರೆ ಸಂಚಾಲಕ ಬುಳ್ಳಹಳ್ಳಿ ರಾಜಪ್ಪ ಹೇಳಿದರು.
ದೇವನಹಳ್ಳಿ ತಾಲೂಕು ಕೊಡಗುರ್ಕಿ ಗ್ರಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕತ್ತಿ ಮಾರಮ್ಮ ದೇವಸ್ಥಾನದ ಬಳಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರು ತ್ಯಾಗ, ತಪಸ್ಸು ಮತ್ತು ಸಮರ್ಪಣೆಯ ಮೂಲಕ ಸ್ವತಂತ್ರ ಭಾರತದ ಕನಸನ್ನು ನನಸಾಗಿಸಿದ್ದಾರೆ ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಹರ್‌ಘರ್ ತಿರಂಗಾ ವಿಶೇಷ ಮಹತ್ವ ಪಡೆದುಕೊಂಡಿದೆ ಎಂದರು.
ಎಲ್ಲರೂ ಒಂದಾಗಬೇಕು: ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವಿಕುಮಾರ್ ಮಾತನಾಡಿ, ನಮ್ಮ ದೇಶ ಶಾಂತಿಪ್ರಿಯ ದೇಶವಾಗಿದೆ. ಯಾವುದೇ ಪಕ್ಷ, ಜಾತಿ, ಧರ್ಮ ನೋಡದೆ ದೇಶ ಎಂದು ಬಂದಾಗ ಎಲ್ಲರೂ ಒಂದಾಗಬೇಕು ಎಂದರು. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದವರನ್ನು ಸ್ಮರಿಸಬೇಕು. ದೇಶದ ಬಗ್ಗೆ ಯಾವುದೇ ಪಕ್ಷದವರು ಕರೆಕೊಟ್ಟರು ನಾವು ಹೋಗಬೇಕು. ನಮ್ಮ ತಾಯಿ ಮತ್ತು ದೇಶ ಹಾಗೂ ಸಂಸ್ಕೃತಿಯನ್ನು ಮರೆತರೆ ದೇಶವು ನಾಶದ ಕಡೆ ಹೋಗುತ್ತದೆ ಎಂಬುದನ್ನು ಅರಿಯಬೇಕು ಎಂದರು.
ಸ್ವಚ್ಛತಾ ಕಾರ್ಯಕ್ರಮ: ಕೊಡಗುರ್ಕಿ ಗ್ರಾಮದಲ್ಲಿನ ಕತ್ತಿ ಮಾರಮ್ಮ ದೇವಸ್ಥಾನ ಬಳಿ ಬಿಜೆಪಿ ಬೆಂಗಳೂರು ಗ್ರಾಮಾಂತರ ಮಹಿಳಾ ಮೊರ್ಚಾ ಘಟಕದಿಂದ ರಕ್ತದಾನ ಶಿಬಿರ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ. ಆರ್.ಅಂಬೇಡ್ಕರ್, ನಾಡಪ್ರಭು ಕೆಂಪೇಗೌಡ, ಮಾಜಿ ಪ್ರಧಾನಿ ಬಾಬು ಜಗಜೀವನ್‌ರಾಮ್ ಪ್ರತಿಮೆಗಳ ಬಳಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.