

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ರಕ್ತನಿಧಿ (ಬ್ಲಡ್‌ಬ್ಯಾಂಕ್) ಆರಂಭಕ್ಕೆ ಕಾಲ ಕೂಡಿಬರುತ್ತಿದೆ. ಅದು ಒಂದಲ್ಲ ಎರಡೂ ಕಡೆ ರಕ್ತ ನಿಧಿ ಸ್ಥಾಪನೆಗೆ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಮಾರು 15 ರಕ್ತ ನಿಧಿ ಸ್ಥಾಪನೆಗೆ ಸರ್ಕಾರ ಪಟ್ಟಿ ಸಿದ್ದಪಡಿಸಿದೆ ಎನ್ನಲಾಗಿದ್ದು, ಈ ಪಟ್ಟಿಯಲ್ಲಿ ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಹಾಗೂ ನೆಲಮಂಗಲ ತಾಲೂಕಿನ ದಾಬಸ್‌ಪೇಟೆಯಲ್ಲಿ ತಲಾ ಒಂದೊಂದು ರಕ್ತ ನಿಧಿ ಸ್ಥಾಪನೆಯಾಗಲಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಭರವಸೆ ವ್ಯಕ್ತಪಡಿಸಿದೆ. ರಕ್ತಹೀನತೆ, ಕ್ಯಾನ್ಸರ್ ಸೇರಿ ವಿವಿಧ ಕಾಯಿಲೆಗಳಿಗೆ ಹಾಗೂ ಅಪಘಾತದಂಥ ಸನ್ನಿವೇಶಗಳಲ್ಲಿ ಮನುಷ್ಯನ ಪ್ರಾಣ ರಕ್ಷಣೆಗೆ ಅವಶ್ಯವಾಗಿರುವ ರಕ್ತಕ್ಕೆ ಅತೀವ ಬೇಡಿಕೆ ಇರುತ್ತದೆ. ಆದರೆ ಗ್ರಾಮಾಂತರ ಜಿಲ್ಲೆಯಲ್ಲಿ ಸುಸಜ್ಜಿತ ರಕ್ತ ನಿಧಿ ಇಲ್ಲದಿರುವುದು ತುರ್ತು ಪರಿಸ್ಥಿತಿಯಲ್ಲಿ ರಕ್ತಕ್ಕೆ ಅಲೆದಾಡುವಂತಾಗಿದೆ ಎಂಬ ಜಿಜ್ಞಾಸೆ ಈ ಹಿಂದಿನಿಂದಲೂ ಜನರ ಬೇಸರಕ್ಕೆ ಕಾರಣವಾಗಿದೆ.
ಬೆಂಗಳೂರಿನ ಬ್ಲಡ್‌ಬ್ಯಾಂಕ್ ಆಸರೆ: ಈ ಹಿಂದೆ ಬೆಂಗಳೂರಿನ ಸಿವಿ ರಾಮನ್ ಆಸ್ಪತ್ರೆಯ ರಕ್ತನಿಧಿಯಿಂದ ಜಿಲ್ಲೆಗೆ ರಕ್ತ ರವಾನೆಯಾಗುತ್ತಿತ್ತು. ಇತ್ತೀಚಿಗೆ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ ರಕ್ತ ನಿಧಿಯಿಂದಲೂ ಜಿಲ್ಲೆಗೆ ರಕ್ತ ತರಿಸಿಕೊಳ್ಳಲಾಗುತ್ತಿದೆ ಪ್ರಸ್ತುತ ಇವೆರಡು ಆಸ್ಪತ್ರೆಗಳು ಜಿಲ್ಲೆಗೆ ಆಸರೆಯಾಗಿವೆ.
ಸಾರ್ವನಿಕ ಆಸ್ಪತ್ರೆಗಳಲ್ಲಿ ಲಭ್ಯ: ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತ ಶೇಖರಣೆ ವ್ಯವಸ್ಥೆ ಇದೆ, ತುರ್ತು ಪರಿಸ್ಥಿತಿಯಲ್ಲಿ ರಕ್ತದ ಪೂರೈಕೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಚಿಕಿತ್ಸೆ ವೇಳೆ ರಕ್ತದ ಅವಶ್ಯಕತೆ ಇದ್ದರೆ ರೋಗಿಗಳಿಗೆ ರಕ್ತ ತರುವಂತೆ ಚೀಟಿ ಬರೆದುಕೊಡುವಂತಿಲ್ಲ. ಆಸ್ಪತ್ರೆಯಲ್ಲೇ ವ್ಯವಸ್ಥೆ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುನೀಲ್‌ಕುಮಾರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ನಿಧಾನ: ದೊಡ್ಡಬಳ್ಳಾಪುರ ಬಸ್ ನಿಲ್ದಾಣದ ಬಳಿಯ ಹಳೇ ಆಸ್ಪತ್ರೆ ಕಟ್ಟಡವನ್ನು ರಕ್ತನಿಧಿ ಸ್ಥಾಪನೆಗೆ ಆಯ್ಕೆ ಮಾಡಲಾಗಿದ್ದು, ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ರಕ್ತನಿಧಿ ಕೇಂದ್ರಕ್ಕೆ ಅವಶ್ಯಕವಾಗಿರುವ ಪರಿಕರಗಳ ಪೂರೈಕೆಗೆ ಆರ್ಡರ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ರಕ್ತನಿಧಿ ಕಟ್ಟಡದಲ್ಲಿ ಉಪಕರಣ ಹಾಗೂ ಪರಿಕರಗಳ ಅಳವಡಿಕೆ (ಇನ್ಟಾಲೇಷನ್) ಕಾರ್ಯ ಆರಂಭವಾಗಲಿದೆ ಎನ್ನಲಾಗಿತ್ತು. ಆದರೆ ಯೋಜನೆ ಕುಂಟುತ್ತಾ ಸಾಗಿದೆ. ಇದರ ನಡುವೆ ಹೊಸದಾಗಿ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದರೆ ತಕ್ಷಣ ಕಾರ್ಯಾರಂಭಕ್ಕೆ ಸಿದ್ದತೆ ಮಾಡಿಕೊಳ್ಳುವುದಾಗಿ ಜಿಲ್ಲಾಡಳಿತ ತಿಳಿಸಿದೆ.
ತಾಲೂಕುವಾರು ಕ್ಯಾಂಪ್: ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಆರ್.ಲತಾ ಅವರ ಅವಧಿಯಲ್ಲಿ ತಾಲೂಕುವಾಗು ಮೆಗಾ ಬ್ಲಡ್‌ಕ್ಯಾಂಪ್‌ಗಳನ್ನು ಆಯೋಜಿಸಲು ಸೂಚನೆ ರವಾನೆಯಾಗಿತ್ತು. ಅದರಂತೆ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ದೊಡ್ಡಮಟ್ಟದಲ್ಲಿ ರಕ್ತದಾನ ಶಿಬಿರ ಆಯೋಜನೆಗೆ ಆರೋಗ್ಯ ಇಲಾಖೆ ಮುಂದಾಗಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಯಕ್ರಮ ಯಶಸ್ವಿಯಾಗಲಿಲ್ಲ. ಇದೇ ಮಾದರಿಯಲ್ಲಿ ಪ್ರಸ್ತುತ
ರಕ್ತದ ಕೊರತೆ ನೀಗಿಸಲು ಹಾಗೂ ರಕ್ತನಿಧಿಗಳಿಗೆ ರಕ್ತ ಪೂರೈಸಲು ತಾಲೂಕುವಾರು ರಕ್ತದಾನ ಶಿಬಿರಗಳನ್ನು ಆಯೋಜಿಸಲು ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದೆ ಇದರ ಜತೆಗೆ ಹೋಬಳಿವಾರು ಕ್ಯಾಂಪ್‌ಗಳನ್ನು ಮಾಡಿ ಗರಿಷ್ಟ ಮಟ್ಟದಲ್ಲಿ ರಕ್ತ ಸಂಗ್ರಹಕ್ಕೆ ಮುಂದಾಗುವಂತೆ ಅಧಿಕಾರಿಗಳಿಗೆ ಆರೋಗ್ಯ ಇಲಾಖೆ ತಾಕೀತು ಮಾಡಿದೆ. ಇದರೊಂದಿಗೆ ಜಿಲ್ಲೆಯ ಅಷ್ಟೂ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿಗಳಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿ ಅಲ್ಲಿಯೇ ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲು ಚಿಂತನೆ ನಡೆಸಿದೆ.
ರಾಜ್ಯದ ಸುಮಾರು 15 ಕಡೆಗಳಲ್ಲಿ ರಕ್ತನಿಧಿ ಸ್ಥಾಪನೆಗೆ ಸರ್ಕಾರ ಚಿಂತನೆ ನಡೆಸಿದೆ. ಇದರ ಪೈಕಿ ಗ್ರಾಮಾಂತರ ಜಿಲ್ಲೆಯ ದಾಬಸ್‌ಪೇಟೆ ಹಾಗೂ ದೊಡ್ಡಬಳ್ಳಾಪುರದಲ್ಲಿ ರಕ್ತ ನಿಧಿ ಸ್ಥಾಪನೆಗೆ ಪ್ರಸ್ಥಾವನೆ ಸಲ್ಲಿಕೆಯಾಗಿದೆ. ಶೀಘ್ರದಲ್ಲೇ ಇದಕ್ಕೆ ಅನುಮೋದನೆ ಸಿಗುವ ನಿರೀಕ್ಷೆ ಇದೆ. ರಕ್ತದ ಕೊರತೆ ನೀಗಿಸಲು ಹೋಬಳಿ ಹಾಗೂ ತಾಲೂಕುವಾರು ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ರಕ್ತದಾನದ ಬಗ್ಗೆ ಸಾರ್ವಜನಿರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಡಾ.ಸುನೀಲ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ